ಧಾರವಾಡದ ಶಾಲಾಶಿಕ್ಷಣ ಸಂಕಥನ ಬಿಡುಗಡೆ 27ರಂದು

d995da43-58bf-4078-ae52-d711c8d79d6c
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಹಾಗೂ ಡಾ. ಎಚ್​.ಎಫ್​. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನಗಳ ಆಶ್ರಯದಲ್ಲಿ ಧಾರವಾಡದ ಶಾಲಾ ಶಿಕ್ಷಣ ಸಂಕಥನ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಡಿ. 27ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್​)ಆವರಣದಲ್ಲಿ ಏರ್ಪಡಿಸಲಾಗಿದೆ.

ಗದಗ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮಿಜಿ ಸಮಾರಂಭ ಉದ್ಘಾಟಿಸುವರು. ಭಾರತೀಯ ತಂತ್ರಜ್ಞಾನ ಸಂಸ್ಥೆ ಗೌರವ ಪ್ರಾಧ್ಯಾಪಕ ಎಸ್​.ಎಂ. ಶಿವಪ್ರಸಾದ್​ ಕೃತಿ ಬಿಡುಗಡೆ ಮಾಡುವರು. ಶಾಲಾ ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಕೃತಿ ಪರಿಚಯ ಮಾಡುವರು. ಶಾಲಾ ಶಿಕ್ಷಣ ಇಲಾಖೆ ಕಿತ್ತೂರ ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 3 ಗಂಟೆಗೆ ಸಂವಾದ ನಡೆಯಲಿದ್ದು, ಕೃತಿ ಕುರಿತು ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಹಾಗೂ ಹಿರೇಮಲ್ಲೂರು ಈಶ್ವರನ್​ ಕಾಲೇಜಿನ ಪ್ರಾಚಾರ್ಯ ಡಾ. ಶಶಿಧರ ತೋಡಕರ ಸಂವಾದ ನಡೆಸಿ ಕೊಡುವರು. ಶಾಲಾ ಶಿಕ್ಷಣ ಇಲಾಖೆ ಪ್ರಭಾರಿ ನಿರ್ದೇಶಕ ಈಶ್ವರ ನಾಯಕ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಲೀಲಕ್ಕ ಬೆಲ್ಲದ ಪಾಲ್ಗೊಳ್ಳುವರು.

ಧಾರವಾಡದ ಶಾಲಾ ಶಿಕ್ಷಣ ಸಂಕಥನ ಕೃತಿಯು 1961 ರಿಂದ 2020ರವರೆಗೆ ಧಾರಾನಗರಿಯ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್​ ಕಾಲೇಜು, ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಅವರ 60 ವರ್ಷಗಳ ಶಿಕ್ಷಣ ಸೇವಾ ನೆನಪುಗಳು, ವಿದ್ಯಾ ವಿಕಾಸದ ಅನೇಕ ಚಿಂತನೆಗಳನ್ನು ಒಳಗೊಂಡಿದೆ. ಟ್ರೇನಿಂಗ್​ ಕಾಲೇಜಿನ ಚಾರಿತ್ರಿಕ ಸಂಗತಿಗಳ ದಾಖಲೆಯಾಗಿ ಕೃತಿ ಮೂಡಿ ಬಂದಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಯುವರಾಜ ನಾಯಕ, ಎಸ್​. ಬಿ. ಕೊಡ್ಲಿ ಮತ್ತು ಡಯಟ್​ ಪ್ರಾಚಾರ್ಯೆ ಜಯಶ್ರೀ ಕಾರೇಕರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net