ಇಸ್ರೋ ನನಸು ಕಣ್ತುಂಬಿಕೊಂಡ ಧಾರವಾಡಿಗರು

h23-Lingaraj Nagar 2
Published on

ಹುಬ್ಬಳ್ಳಿ: ಇಸ್ರೋದ ಕನಸು ನನಸಾದ ಸಂಭ್ರಮವನ್ನು ಧಾರವಾಡ ಜಿಲ್ಲೆಯ ಜನತೆ ನೇರ ವೀಕ್ಷಣೆ ಮೂಲಕ ಬುಧವಾರ ಕಣ್ತುಂಬಿಕೊಂಡರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜ್​ಗಳಲ್ಲಿ ಚಂದ್ರಯಾನ-3 ಯಶಸ್ವಿಯನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಬಹಳಷ್ಟು ವಿದ್ಯಾರ್ಥಿಗಳು ನೇರ ವೀಕ್ಷಣೆ ಮಾಡುವ ಮೂಲಕ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. ಹುಬ್ಬಳ್ಳಿಯ ಲಿಂಗರಾಜ ನಗರ, ಚನ್ನಮ್ಮ ವೃತ್ತ, ವಿವಿಧ ಬಡಾವಣೆಗಳಲ್ಲಿರುವ ಶಾಲಾ-ಕಾಲೇಜ್, ಸಂಘ-ಸಂಸ್ಥೆಗಳಲ್ಲಿ ಪಟಾಕಿ ಸಿಡಿಸಿ , ಸಿಹಿ ಹಂಚಿ ಭಾರತ ಧ್ವಜ ಹಾರಾಡಿಸಿ ಖುಷಿಪಡಲಾಯಿತು. ಸಿದ್ಧಾರೂಢ ಮಠ ಸೇರಿ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಮನೆ ಮನೆಗಳಲ್ಲಿನ ದೇವರ ಫೋಟೋ ಮುಂದೆ ದೀಪ ಬೆಳಗಿಸಲಾಯಿತು.

ಫೌಂಡೇಷನ್: ಚಂದ್ರಯಾನ -3 ಯಶಸ್ಸಾದ ಹಿನ್ನೆಲೆಯಲ್ಲಿ ನಗರದ ಹಳೇ ಕೋರ್ಟ್ ಬಳಿ ಮಜೇಥಿಯಾ ಫೌಂಡೇಷನ್ ಮತ್ತು ಸಂಸ್ಕೃತ ಭಾರತೀಯ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ, ಅಧ್ಯಕ್ಷೆ ನಂದಿನಿ ಮಜೇಥಿಯಾ, ಸಿಇಒ ಅಜಿತ್ ಕುಲಕರ್ಣಿ, ಪ್ರಮುಖರಾದ ಸುಭಾಸಸಿಂಗ ಜಮಾದಾರ, ಸುನೀಲ ಕುಮಾರ, ಮಂಜು ಹೆಗ್ಗೇರು, ಸತೀಶ ಮೂರೂರ, ಮುಕುಂದ ಜಠಾರ, ಲಕ್ಷ್ಮೀ ನಾರಾಯಣ, ಶ್ರೀಧರ ಜೋಶಿ, ಮಂಜು ಕಾನನ ಉಪಸ್ಥಿತರಿದ್ದರು.

ಮಹೇಶ ಕಾಲೇಜ್: ನಗರದ ಪ್ರಿಯದರ್ಶಿನಿ ಕಾಲನಿಯಲ್ಲಿನ ಎನ್​ಎಲ್​ಇ ಸೊಸೈಟಿಯ ಡಾ. ಆರ್.ಬಿ. ಪಾಟೀಲ್ ಮಹೇಶ ಪದವಿಪೂರ್ವ ವಿಜ್ಞಾನ ಕಾಲೇಜ್​ನಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಚಂದ್ರಯಾನ- 3 ನೇರ ವೀಕ್ಷಣೆ ಮಾಡಿದರು.

ಪ್ರಾಚಾರ್ಯ ರಾಮಮೋಹನ ಎಚ್.ಕೆ. ಮಾತನಾಡಿದರು. ಉಪ ಪ್ರಾಚಾರ್ಯ ರಮೇಶ ಹೊಂಬಾಳೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net