

ಧಾರವಾಡ: ಮಳೆ ಆರ್ಭಟ, ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ಕಡಿತವಾದ ಪರಿಣಾಮ ಅಮರನಾಥ ಯಾತ್ರೆಗೆ ತೆರಳಿದ್ದ ಧಾರವಾಡದ ಐವರು ಪಂಚತರಣಿ ಎಂಬಲ್ಲಿ ಸಿಲುಕಿಕೊಂಡಿದ್ದಾರೆ.
ನಗರದ ವಿಠ್ಠಲ ಬಾಚಗುಂಡಿ, ರಾಕೇಶ ನಾಝರೆ, ಹರೀಶ ಸಾಳುಂಕೆ, ನಾಗರಾಜ ಹಳಕಟ್ಟಿ, ಮಡಿವಾಳಪ್ಪ ಕೊಟಬಾಗಿ ಎಂಬುವವರು ಜು. 3ರಂದು ಧಾರವಾಡದಿಂದ ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಜು. 6ರಂದು ಅಮರನಾಥ ದರ್ಶನ ಮುಗಿಸಿ ಮರಳಿ ಬರುವಾಗ ಮಾರ್ಗ ಬಂದ್ ಆಗಿ ಸಿಲುಕಿಕೊಂಡಿದ್ದಾರೆ.
ಎಲ್ಲ ಯಾತ್ರಾರ್ಥಿಗಳಿಗೂ ಟೆಂಟ್‌ನಲ್ಲಿ ಸೇನಾ ಪಡೆ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ ಅಲ್ಲಿನ ಕೊರೆವ ಚಳಿ, ಸುರಿವ ಮಳೆ ಸೇರಿ ಪ್ರಾಕೃತಿಕ ಸವಾಲಿನಿಂದ ಕೆಲ ಆರೋಗ್ಯ ಸಮಸ್ಯೆಗಳು ಎದುರಾಗಿವೆ ಎಂದು ತಿಳಿದು ಬಂದಿದೆ. ಯಾತ್ರಾರ್ಥಿಗಳ ಜತೆಗೆ ಸರ್ಕಾರದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ಕರೆ ತರುವ ಪ್ರಯತ್ನ ನಡೆದಿದೆ.
ಯಾತ್ರೆಗೆ ತೆರಳಿದ್ದವರು ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿಯುತ್ತಿದ್ದಂತೆ ಕುಟುಂಬದವರು ತೀವ್ರ ಆತಂಕಕ್ಕೀಡಾಗಿದ್ದರು. ಸದ್ಯಕ್ಕೆ ಪ್ರಾಣಾಪಾಯ ಪರಿಸ್ಥಿತಿಯೇನೂ ಇಲ್ಲ ಎಂಬ ಮಾಹಿತಿ ತಿಳಿದು ಬಂದಿರುವುದು ಕುಟುಂಬವರಿಗೆ ಸಮಾಧಾನದ ಸಂಗತಿಯಾಗಿದೆ.
ಯಾತ್ರಾರ್ಥಿ ವಿಠ್ಠಲ ಬಾಚಗುಂಡಿ ಸಹೋದರ ಮಹೇಶ ಮಾಧ್ಯಮದವರೊಂದಿಗೆ ಮಾತನಾಡಿ, ನಾವೆಲ್ಲ ಆಂತಕಗೊಂಡಿದ್ದೇವೆ. ಶೀಘ್ರದಲ್ಲಿ ಅವರನ್ನೆಲ್ಲ ಸುರಕ್ಷಿತವಾಗಿ ಕರೆತರಬೇಕು. ವಿಠ್ಠಲ ಮತ್ತು ನಾಲ್ವರು ಸ್ನೇಹಿತರು ಶ್ರೀನಗರ ಮಾರ್ಗವಾಗಿ ಅಮರನಾಥಕ್ಕೆ ತೆರಳಿದ್ದಾರೆ. ಸುದೈವದಿಂದ ಅವರು ದೂರವಾಣಿ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಅಲ್ಲಿ ಉಳಿದುಕೊಳ್ಳಲು ಹಾಗೂ ಊಟದ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಶಾಸಕ ವಿನಯ ಕುಲಕರ್ಣಿ ಅವರೊಂದಿಗೆ ಸಹ ತಾವು ಮಾತನಾಡಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಒತ್ತಾಯಿಸಿದ್ದೇವೆ ಎಂದು ಹೇಳಿದರು.