

ಮರಿದೇವ ಹೂಗಾರ ಹುಬ್ಬಳ್ಳಿ
ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಧಾರವಾಡಿಗರ ನಿರೀಕ್ಷೆ ಅಪಾರವಾಗಿದೆ. ಜಿಲ್ಲೆಗೆ ಹೊಸ ಯೋಜನೆ ಘೋಷಣೆ, ಹೆಚ್ಚಿನ ಅನುದಾನ ಸಿಗಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ ಇಲ್ಲಿನ ಜನ.
ಮುಂಬರುವ ಲೋಕಸಭೆ, ಜಿಪಂ, ತಾಪಂ ಚುನಾವಣೆಯ ಮೇಲೆ ಪರಿಣಾಮ ಬೀರುವಂಥ ಅನುದಾನ, ಯೋಜನೆ ಸಿಗಲಿದೆಯೇ? ಎಂಬ ಚರ್ಚೆಗಳು ಸಹ ನಡೆದಿವೆ.
ಈ ಭಾಗದ ಕಳಸಾ-ಬಂಡೂರಿ ಯೋಜನೆಗೆ ಈಗಾಗಲೇ ಅನುದಾನ ಮೀಸಲಿಟ್ಟಿದ್ದು, ಬಳಕೆ ಆಗಿಲ್ಲ. ಹೆಚ್ಚುವರಿ ಇಲ್ಲವೆ ಪರಿಷ್ಕೃತ ಅನುದಾನ ಘೋಷಿಸಬೇಕು. ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕೆಂಬ ಒತ್ತಾಯ ಈ ಭಾಗದ ರೈತರದು.
138 ಕಿ.ಮೀ. ಉದ್ದದ ಬೆಣ್ಣಿಹಳ್ಳ, ಉಪಹಳ್ಳಗಳ ಅಭಿವೃದ್ಧಿಗೆ ಕರ್ನಾಟಕ ನೀರಾವರಿ ನಿಗಮವು ಬೃಹತ್ ಗಾತ್ರದ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸಿದೆ. ಕೋರಿಕೆಗೆ ತಕ್ಕಂತೆ ಅನುದಾನ ನಿಗದಿಪಡಿಸಿ ಕಾಮಗಾರಿ ಆರಂಭಿಸಿದರೆ, ಮಳೆಗಾಲದಲ್ಲಿ ಅನುಭವಿಸುವ ನೆರೆ ಹಾವಳಿಯ ಸಮಸ್ಯೆ ನಿವಾರಣೆಯಾಗಲಿದೆ.
5 ಕೋಟಿ ರೂ. ಕೊಡಿ: ಅಮರಗೋಳದಲ್ಲಿ ಉನ್ನತೀಕರಿಸಿದ ಬೃಹತ್ ವಸ್ತು ಪ್ರದರ್ಶನ ಮಳಿಗೆ ಸ್ಥಾಪಿಸಿ, 5 ಕೋಟಿ ರೂ. ಅನುದಾನ ಮಂಜೂರು ಮಾಡಬೇಕು. ಇದರಿಂದ ಕೌಶಲಾಭಿವೃದ್ಧಿ ಕೇಂದ್ರ ತೆರೆಯಲು ಅನುಕೂಲವಾಗುತ್ತದೆ.
ರಿಯಾಯಿತಿ ಪ್ರಕಟಿಸಲಿ: ವಿಶೇಷ ಬಂಡವಾಳ ಹೂಡಿಕೆ ವಲಯ (ಎಸ್‌ಐಆರ್)ಹಾಗೂ ಎಂಎಸ್‌ಎಂಇ ಘಟಕಗಳಿಗೆ ರಿಯಾಯಿತಿ ಪ್ರಕಟಿಸಬೇಕು. ಧಾರವಾಡದ ಮುಮ್ಮಿಗಟ್ಟಿಯಲ್ಲಿ ಈಗಾಗಲೇ ಉದ್ಘಾಟನೆಗೊಂಡಿರುವ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಪ್ರತಿ ಎಕರೆಗೆ 98 ಲಕ್ಷ ರೂ. ಕಡಿಮೆ ದರದಲ್ಲಿ ಭೂಮಿ ನೀಡಲು ಸರ್ಕಾರ ಘೋಷಿಸಿದೆ. ಆದರೆ, ಈವರೆಗೆ ಯಾವುದೇ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ರಿಯಾಯಿತಿ ನೀಡಿ, ಶೀಘ್ರವಾಗಿ ಈ ಘಟಕ ಆರಂಭಿಸಬೇಕು. ಇಎಸ್‌ಡಿಎಂ ಮತ್ತು ಐಟಿ ಕಂಪನಿಗಳಿಗೆ 500 ಎಕರೆ ಭೂ ಬ್ಯಾಂಕ್ ಅಭಿವೃದ್ಧಿಪಡಿಸಬೇಕು. ವಿಶೇಷವಾಗಿ ಹೆಚ್ಚಳವಾಗಿರುವ ವಿದ್ಯುತ್ ದರವನ್ನು ಇಳಿಕೆ ಮಾಡಬೇಕು.
ಬೃಹತ್ ಜವಳಿ ಪಾರ್ಕ್: ಮಾಹಿತಿ ತಂತ್ರಜ್ಞಾನ ಪಾರ್ಕ್ ಮಾದರಿಯಲ್ಲಿ ಈ ಭಾಗದಲ್ಲಿ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳಿಗೆ ಬಹು ಉಪಯೋಗಿ ಬಳಕೆದಾರರ ಮಳಿಗೆಗಳನ್ನು (ಮಲ್ಟಿ ಪರ್ಪಸ್ ಯೂಸರ್ಸ್ ಫಾರ್ ಮಿನಿ ಇಂಡಸ್ಟ್ರೀಸ್ ಯೂನಿಟ್ಸ್) ನಿರ್ಮಿಸಬೇಕು. 5 ಅಥವಾ 10 ವರ್ಷಗಳವರೆಗೆ ಬಾಡಿಗೆ ಮತ್ತು ಲೀಜ್ ಆಧಾರದ ಮೇಲೆ ಮ್ಯಾನ್ಯುಫ್ಯಾಕ್ಚರಿಂಗ್ ಘಟಕಗಳಿಗೆ ನೀಡಿ, ಸ್ಟಾರ್ಟಪ್‌ಗಳನ್ನು ಪ್ರೋತ್ಸಾಹಿಸಲು ಉತ್ತೇಜನ ನೀಡಬೇಕು. ಔದ್ಯಮಿಕ ವಸಾಹತು ಪ್ರದೇಶದಲ್ಲಿ ಜಾಗ ಗುರುತಿಸಿ ಬಜೆಟ್‌ನಲ್ಲಿ ಘೋಷಿಸಬೇಕು. ನವಲಗುಂದದಲ್ಲಿ ಜವಳಿ ಪಾರ್ಕ್ ನಿರ್ಮಿಸಲು ಹಿಂದಿನ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿ -ಧಾರವಾಡದ ಮಧ್ಯದಲ್ಲಿ ಬೃಹತ್ ಜವಳಿ ಪಾರ್ಕ್ (ಮೆಗಾ ಟೆಕ್ಸ್‌ಟೈಲ್ ಪಾರ್ಕ್) ಘೋಷಿಸಿ, ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಯಾಕೆಂದರೆ ಎಲ್ಲ ತರಹದ ಸಿದ್ಧ ಉಡುಪುಗಳ ತಯಾರಿಕಾ ಘಟಕ ತೆರೆಯಲು ಬಹಳಷ್ಟು ಅನುಕೂಲವಾಗಲಿದೆ.
ಸಿದ್ದರಾಮಯ್ಯ ಅವರು 14ನೇ ಬಾರಿ ರಾಜ್ಯದ ಬಜೆಟ್ ಮಂಡಿಸಲಿದ್ದಾರೆ. ಅವರು ವಿಶೇಷ ಆರ್ಥಿಕ ಜ್ಞಾನ ಹೊಂದಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಹೊಸ ತೆರಿಗೆ ಘೋಷಿಸದೆ, ಸಾಮಾನ್ಯ ಜನರಿಗೆ ಹೊರೆಯಾಗದಂತೆ ಆದಾಯ ಕ್ರೋಡೀಕರಣಕ್ಕೆ ಅಡಿಪಾಯ ಹಾಕಬೇಕು. ಧಾರವಾಡ ಜಿಲ್ಲೆಗೆ ಹೆಚ್ಚಿನ ಅನುದಾನ, ಹೊಸ ಯೋಜನೆಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆ ಇದೆ. - ವಿನಯ ಜವಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ
ಕಾರ್ಮಿಕರಿಗೆ ಕೌಶಲ ನೀಡುವ ಸಂಬಂಧ ಆಯಾ ಜಿಲ್ಲೆಗಳಲ್ಲಿ ಕೌಶಲ ಕೇಂದ್ರಗಳನ್ನು ಸ್ಥಾಪಿಸಬೇಕು. ಆಸ್ತಿ ಮತ್ತು ಸ್ಟಾೃಂಪ್ ಡ್ಯೂಟಿ ತೆರಿಗೆಯಲ್ಲಿ ರಾಜ್ಯ ಸರ್ಕಾರದ ನಿಲುವು ಅಸ್ಪಷ್ಟವಾಗಿದ್ದು, ಪಾರದರ್ಶಕ ಪ್ರದರ್ಶಿಸಬೇಕು. ಈ ಮೂಲಕ ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು. -ಪ್ರದೀಪ ರಾಯ್ಕರ್ ಕ್ರೆಡೈ ರಾಜ್ಯಾಧ್ಯಕ್ಷ
ಜಿಲ್ಲೆಗೆ ಏನೇನು ಬೇಕು?
ಹು-ಧಾ ಮಹಾನಗರ ಪಾಲಿಕೆಗೆ ವಿಶೇಷ ಅನುದಾನ ಘೋಷಿಸುವ ಮೂಲಕ ಅಭಿವೃದ್ಧಿಗೆ ಮುನ್ನುಡಿ
ಹೊಸ ತಾಲೂಕುಗಳಾದ ಅಣ್ಣಿಗೇರಿ, ಅಳ್ನಾವರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವುದು
ಹುಬ್ಬಳ್ಳಿಯಲ್ಲಿ ಇಲೆಕ್ಟ್ರಿಕ್ ವೆಹಿಕಲ್ಸ್ ಕ್ಲಸ್ಟರ್ ಸ್ಥಾಪನೆ
ಕಿಮ್ಸ್ ಸಿಬ್ಬಂದಿಯ ಸಂಬಳ ಹೊರತಾಗಿ ವಿಶೇಷ ಅನುದಾನ ಅಗತ್ಯ
ವಿಶೇಷ ಹೂಡಿಕೆ ವಲಯ (ಎಸ್‌ಐಆರ್) ಅಡಿ ಅತೀ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿದಾರರಿಗೆ ಒಂದು ಎಕರೆವರೆಗೆ ರಿಯಾಯಿತಿ ದರದಲ್ಲಿ ಭೂಮಿ (ಪ್ರಸ್ತುತ ಇರುವ ಭೂಮಿ ದರದಲ್ಲಿ ಶೇ. 30ರಷ್ಟು) ನೀಡಿ ಪ್ರೋತ್ಸಾಹಿಸಬೇಕು
ವಾಲ್ವ್‌ಗಳು, ಪಂಪ್‌ಗಳು, ಹತ್ತಿ, ಸಂಸ್ಕರಿಸಿದ ಆಹಾರೋತ್ಪನ್ನ, ಎಫ್‌ಎಂಸಿಜಿ ಕ್ಲಸ್ಟರ್, ಕೈಗಾರಿಕಾ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ನವಲೂರಿನಲ್ಲಿ ಇನ್‌ಲ್ಯಾಂಡ್ ಕಂಟೇನರ್ ಡಿಪೋ ಸ್ಥಾಪಿಸಲು ಅನುದಾನ ಮೀಸಲಿಡಿ.
ಹುಬ್ಬಳ್ಳಿ ದಕ್ಷಿಣ ಭಾಗದಲ್ಲಿ ಮಾತ್ರ ಟ್ರಕ್ ಟರ್ಮಿನಲ್ ಸ್ಥಾಪನೆಯಾಗಿದೆ. ಹುಬ್ಬಳ್ಳಿ ನಗರದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಟ್ರಕ್ ಟರ್ಮಿನಲ್ ಸ್ಥಾಪಿಸಲು ಮತ್ತು ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಅನುದಾನ ಕೊಡಿ.
ಹು-ಧಾ ಅವಳಿ ನಗರದ ಭವಿಷ್ಯ ದೃಷ್ಟಿಯಿಟ್ಟುಕೊಂಡು ಮಾಸ್ಟರ್ ಪ್ಲಾೃನ್ ಜಾರಿಯಾಗಬೇಕು. ಇದರಿಂದ ನಗರಾಭಿವೃದ್ಧಿ ಜತೆಗೆ ಆರ್ಥಿಕವಾಗಿ ಸದೃಢವಾಗಲಿದೆ. ಮೂಲ ಸೌಕರ್ಯಕ್ಕಾಗಿ 500 ಕೋಟಿ ರೂ. ಅನುದಾನ ಮೀಸಲಿಡಬೇಕು
ಅವಳಿ ನಗರದಲ್ಲಿ ಘನತ್ಯಾಜ್ಯ ಶೇಖರಣೆಗೆ ಆಧುನಿಕ ಸಂಸ್ಕರಣಾ ಯಂತ್ರ ಸ್ಥಾಪಿಸಿ ಘನತ್ಯಾಜ್ಯ ನಿರ್ವಹಣೆ ಮಾಡಬೇಕು