

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಧಾರವಾಡ ಜಿಲ್ಲೆಯ ಯುವ ರೈತರೊಬ್ಬರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಹಳದಿ ಕಲ್ಲಂಗಡಿ ಹಣ್ಣು ಬೆಳೆದು ಯಶಸ್ವಿಯಾಗಿದ್ದಾರೆ. ಹೌದು. ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ರೈತ ಮೈಲಾರಪ್ಪ ತಿರಕಪ್ಪ ಗುಡ್ಡಪ್ಪನವರ ತಮ್ಮ ಒಂದು ಎಕರೆ ಜಮೀನಿನಲ್ಲಿ ಎಫ್-1 ಯಲ್ಲೋ ಕಲ್ಲಂಗಡಿ ತಳಿ ಬೆಳೆದು ಯಶ ಕಂಡಿದ್ದಾರೆ. ಈ ಮೊದಲು ಕೆಂಪು ಕಲ್ಲಂಗಡಿ ಬೆಳೆಯುತ್ತಿದ್ದ ಇವರು ಈ ಬಾರಿ ತೋಟಗಾರಿಕೆ ಇಲಾಖೆಯ ಸಲಹೆ ಪಡೆದು ಒಂದು ಎಕರೆಯಲ್ಲಿ ಹಳದಿ ಕಲ್ಲಂಗಡಿ ಬೆಳೆದಿದ್ದಾರೆ.
1 ಎಕರೆ ಭೂಮಿಯಲ್ಲಿ 10 ಟನ್ ಕಲ್ಲಂಗಡಿ ಬೆಳೆ ಬಂದಿದೆ. ಕೆಜಿಗೆ 40 ರೂ.ನಂತೆ ಮಾರಾಟವಾಗಿದ್ದು, ಎಲ್ಲ ಖರ್ಚು ಕಳೆದು ಮೂರು ಲಕ್ಷ ರೂಪಾಯಿ ಆದಾಯ ಬಂದಿದೆ. 1 ಎಕರೆಯಲ್ಲಿ ಕೆಂಪು ಕಲ್ಲಂಗಡಿ ಬೆಳೆದಿದ್ದು, ಅದು ಕೂಡ 12 ಟನ್ ಇಳುವರಿ ಬಂದಿದೆ. ಅದು 10 ರೂ.ಗೆ ಕೆಜಿಯಂತೆ ಮಾರಾಟವಾಗಿದ್ದು, 1.20 ಲಕ್ಷ ರೂ. ಆದಾಯ ಬಂದಿದೆ.
68 ದಿನಗಳ ಬೆಳೆ: ಕಲ್ಲಂಗಡಿ 68 ದಿನಗಳ ಬೆಳೆಯಾಗಿದೆ. 2025ರ ಜನವರಿ 12ರಂದು 1 ಎಕರೆಯಲ್ಲಿ 3,500 ಸಸಿಗಳನ್ನು ತಂದು ನಾಟಿ ಮಾಡಲಾಯಿತು. ಹಂತಹಂತವಾಗಿ ಹನಿ ನೀರಾವರಿ ಮೂಲಕ ನೀರು, ಗೊಬ್ಬರ ನೀಡಲಾಯಿತು. ಮಾ. 16ರಿಂದ ಬೆಳೆ ಕಟಾವಿಗೆ ಬಂದಿದೆ. ಹಳದಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚು: ತೋಟಕ್ಕೆ ಬರುವ ವ್ಯಾಪಾರಸ್ಥರು ಹಳದಿ ಕಲ್ಲಂಗಡಿಗೆ ಹೆಚ್ಚು ಬೇಡಿಕೆ ಇಡುತ್ತಿದ್ದಾರೆ. ಕಟಾವು ಮಾಡಿದ 10 ದಿನಗಳಲ್ಲಿ ಹಳದಿ ಕಲ್ಲಂಗಡಿ ಖಾಲಿಯಾಗಿದೆ ಎನ್ನುತ್ತಾರೆ ರೈತ ಮೈಲಾರಪ್ಪ.
ಕೆಂಪು ಕಲ್ಲಂಗಡಿ: 1ಎಕರೆಯಲ್ಲಿ ಕೆಂಪು ಕಲ್ಲಂಗಡಿ ಬೆಳೆದಿದ್ದು, ಇದು ಅಂದಾಜು 12ರಿಂದ 13 ಟನ್ ಬರುವ ನಿರೀಕ್ಷೆ ಇದೆ. ಇದು 10 ರೂ.ಗೆ ಕೆಜಿಯಂತೆ ಮಾರಾಟ ಮಾಡಿದ್ದು, ಅಂದಾಜು 1.20 ಲಕ್ಷ ರೂ. ಆದಾಯ ಬಂದಿದೆ.
ಮಿಶ್ರ ಬೆಳೆ ಬೆಳೆಯುವ ರೈತ ಒಟ್ಟು 20 ಎಕರೆ ಜಮೀನು ಹೊಂದಿರುವ ರೈತ ಮೈಲಾರಪ್ಪ 2 ಎಕರೆಯಲ್ಲಿ ತೋಟಗಾರಿಕೆ ಬೆಳೆ, ಇನ್ನುಳಿದ 18 ಎಕರೆಯಲ್ಲಿ ಸೋಯಾಬಿನ್, ಹತ್ತಿ, ಮೆಣಸಿನಕಾಯಿ, ಗೋಧಿ ಬೆಳೆಯುತ್ತಾರೆ. ತೋಟಗಾರಿಕೆಯಲ್ಲಿ ಸೇವಂತಿ ಹೂವು, 10 ಗುಂಟೆಯಲ್ಲಿ ಕ್ಯಾಪ್ಸಿಕಮ್ (ಡೊಣ್ಣ ಮೆಣಸಿನಕಾಯಿ) ಬೆಳೆದಿದ್ದಾರೆ. ಹಳದಿ ಕಲ್ಲಂಗಡಿ ಪ್ರಯೋಜನ ಹಳದಿ ಕಲ್ಲಂಗಡಿಯಲ್ಲಿ ವಿಟಮಿನ್ ಎ ಮತ್ತು ಸಿ, ಬೀಟಾ ಕ್ಯಾರೋಟಿನ್ ಮತ್ತು ಪೊಟ್ಯಾಷಿಯಂನಂತಹ ಅಂಶಗಳು ಹೇರಳವಾಗಿವೆ. ಇದು ದೇಹಕ್ಕೆ ರೋಗ ನಿರೋಧಕ ಶಕ್ತಿ ನೀಡುತ್ತದೆ. ಕಣ್ಣು ಮತ್ತು ಚರ್ಮದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಇದು ಏಪ್ರಿಕಾಟ್ ಹಣ್ಣಿನಂಥ ಸುವಾಸನೆ ಹೊಂದಿದೆ. ಹಣ್ಣು ಹಳದಿ ಇರಲು ಕಾರಣ ಕಲ್ಲಂಗಡಿ ಹಣ್ಣು ಹಳದಿ ಬಣ್ಣ ಇರಲು ಕಾರಣವೆಂದರೆ ಈ ತಳಿಯಲ್ಲಿ ಲೈಕೋಪಿನ್ ಪ್ರಮಾಣ ಕಡಿಮೆ ಇರುವುದು ಮತ್ತು ಬೀಟಾ ಕ್ಯಾರೋಟಿನ್ ಅಂಶ ಹೆಚ್ಚಿಗೆ ಇರುವುದರಿಂದ ಹಣ್ಣು ಬಣ್ಣಕ್ಕೆ ತಿರುಗುತ್ತದೆ ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ನಾನು 10 ಹತ್ತು ವರ್ಷಗಳಿಂದ ಕೃಷಿ ಮಾಡುತ್ತಿದ್ದೇನೆ. ಊರಿನಲ್ಲಿ 2016ರಲ್ಲಿ ಮೊದಲ ಬಾರಿಗೆ ಹನಿ ನೀರಾವರಿ ಮಾಡಿದೆ. ಇದರಿಂದ ಪ್ರೇರಣೆಗೊಂಡ ಗ್ರಾಮದ ಇತರ ರೈತರು ಹನಿ ನೀರಾವರಿಗೆ ಮುಂದಾಗಿದ್ದಾರೆ. ಗ್ರಾಮದಲ್ಲಿ ಈಗ 400 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮಾಡುತ್ತಿದ್ದಾರೆ. ಹಳದಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚಿಗೆ ಇರುವುದರಿಂದ ಮುಂದಿನ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವೆ. | ಮೈಲಾರಪ್ಪ ಗುಡ್ಡಪ್ಪನವರ ಹಳದಿ ಕಲ್ಲಂಗಡಿ ಬೆಳೆಗಾರ, ಕುರುಬಗಟ್ಟಿ ರೈತರೊಬ್ಬರು ವಿನೂತನ ಪ್ರಯತ್ನದ ಮೂಲಕ ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿರುವ ಮಾಹಿತಿ ಕೇಳಿದ್ದೆ, ರುಚಿ ಹೇಗಿರಲಿದೆ ಎಂಬ ಬಗ್ಗೆ ನನಗೂ ಕುತೂಹಲ ಇತ್ತು. ಹೀಗಾಗಿ, ನಾನು ಕೂಡ ಹೊಲಕ್ಕೆ ತೆರಳಿ ಬೆಳೆ ವೀಕ್ಷಿಸಿದೆ. ಹಳದಿ ಹಣ್ಣು ಕೆಂಪು ಹಣ್ಣಿಗಿಂತ ಹೆಚ್ಚು ಸಿಹಿ ಮತ್ತು ರುಚಿ ಇದೆ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇನ್ನುಳಿದ ರೈತರು ಇಂಥ ಹೊಸ ಬೆಳೆ ಬೆಳೆದು ಆದಾಯ ವೃದ್ಧಿಸಿಕೊಳ್ಳಬೇಕು. | ದಿವ್ಯ ಪ್ರಭು ಜಿಲ್ಲಾಧಿಕಾರಿ, ಧಾರವಾಡ ಕಲ್ಲಂಗಡಿಯನ್ನು ಉಸುಕುಮಿಶ್ರಿತ ಮಣ್ಣು ಇರುವ ಕಡೆ ಬೆಳೆಯಲಾಗುತ್ತದೆ. ಧಾರವಾಡದಲ್ಲಿ ಮೊದಲ ಬಾರಿಗೆ ರೈತ ಮೈಲಾರಪ್ಪ ಅವರು ಹೊಸ ತಳಿ ಕಲ್ಲಂಗಡಿ ಬೆಳೆಯಲು ಮುಂದಾಗಿ ಯಶಸ್ವಿಯಾಗಿದ್ದಾರೆ. ಅವರಿಗೆ ಹನಿ ನೀರಾವರಿ ಯೋಜನೆಯಡಿ ಸಬ್ಸಿಡಿ ನೀಡಲಾಗಿದೆ. ಅದೇ ರೀತಿ ಜಿಲ್ಲೆಯ ಆಸಕ್ತ ರೈತರು ಇಂಥ ಬೆಳೆ ಬೆಳೆಯಲು ಮುಂದಾಗಬೇಕು. ಅವರಿಗೆ ಇಲಾಖೆಯಿಂದ ತಾಂತ್ರಿಕ ಸಹಾಯ-ಸಹಕಾರ ನೀಡಲಾಗುವುದು. | ಕಾಶಿನಾಥ ಭದ್ರಣ್ಣವರ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಧಾರವಾಡ