

ಧಾರವಾಡ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯಿತಿ ರೂಪಿಸಿದ್ದ `ಧಾರವಾಡಿ ತಳಿ ಎಮ್ಮೆ- ನಮ್ಮ ಹೆಮ್ಮೆ' ಹಾಗೂ ಧಾರವಾಡ ಪೇಢಾದ ಸ್ತಬ್ಧಚಿತ್ರವು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.
ಪ್ರಸಕ್ತ ಸಾಲಿನ ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆಗಳ ಸುಮಾರು ೩೧ ಹಾಗೂ ಇತರ ಇಲಾಖೆಗಳ ೧೮ ಸೇರಿ ೪೯ ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಅವುಗಳಲ್ಲಿ ಆಕರ್ಷಕವಾಗಿ ಮತ್ತು ಅರ್ಥಪೂರ್ಣವಾಗಿ ರೂಪುಗೊಂಡಿದ್ದ ಧಾರವಾಡ ಪೇಢಾ ಮತ್ತು ಧಾರವಾಡಿ ತಳಿ ಎಮ್ಮೆಯ ಸ್ತಬ್ಧಚಿತ್ರ ವೀಕ್ಷಕರ ಗಮನ ಸೆಳೆಯಿತು.
ಜಿಲ್ಲಾ ಪಂಚಾಯಿತಿಯು ಸುಮಾರು ೭.೮೦ ಲಕ್ಷ ರೂ. ವೆಚ್ಚದಲ್ಲಿ ರೂಪಿಸಿದ್ದ ಸ್ತಬ್ಧಚಿತ್ರ ಜಿ.ಪಂ. ಸಿಇಒ ಸ್ವರೂಪ ಟಿ.ಕೆ. ಅವರ ಪರಿಕಲ್ಪನೆ. ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕೈಕುಸುರಿ ಕಲಾವಿದ ಶಶಿಧರ ಗರಗ ಅವರು ಮೈಸೂರು ಹೊರವಲಯದ ಆರ್.ಎಂ.ಸಿ.ಯ ಬಂಡಿಪಾಳ್ಯದಲ್ಲಿ ೧೨ ದಿನ ತಮ್ಮ ಕಲಾಚಳಕದಲ್ಲಿ ಸ್ತಬ್ಧಚಿತ್ರ ನಿರ್ಮಿಸಿದ್ದರು. ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ ಬಂದಿರುವುದು ಜಿಲ್ಲೆಗೆ ಹೆಮ್ಮೆ ಎಂದು ಸಿಇಒ ಸ್ವರೂಪ ಸಂತಸ ವ್ಯಕ್ತಪಡಿಸಿದ್ದಾರೆ.