

ಧಾರವಾಡ: ಹವಾಮಾನ ವೈಪರೀತ್ಯದ ಬಿಕ್ಕಟ್ಟಿನ ಈ ಸಮಯದಲ್ಲಿ ದೇಸಿ ತಳಿಗಳು ಕೃಷಿ ಕ್ಷೇತ್ರಕ್ಕೆ ಪರ್ಯಾಯ ಪರಿಹಾರ ನೀಡಬಲ್ಲವು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ ಹೇಳಿದರು.
ದೇಸಿ ಬೀಜ ವೈವಿಧ್ಯ ಮಹತ್ವ, ರೈತರು ಮತ್ತು ಗ್ರಾಹಕರಲ್ಲಿ ಅರಿವು ಮೂಡಿಸಲು ಸಹಜ ಸಮೃದ್ಧ ಸಂಸ್ಥೆಯು ಪೀಪಲ್ ಫಸ್ಟ್ ಫೌಂಡೇಶನ್ ಸಹಯೋಗದಲ್ಲಿ ನಗರದ ದೇಸಿ ಅಂಗಡಿ ಆವರಣದಲ್ಲಿ ಆಯೋಜಿಸಿರುವ ಮುಂಗಾರು ಬೀಜ ಮೇಳವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಯ ಜೀವನಾಡಿಯಾಗಿರುವ ಬಿತ್ತನೆ ಬೀಜ ಮತ್ತು ದೇಸಿ ತಳಿಗಳು ಸಾವಿರಾರು ವರ್ಷಗಳಿಂದ ಕೃಷಿ ಸಂಸ್ಕೃತಿಯ ಜೊತೆಗೆ ಬೆಸೆದುಕೊಂಡು ಬಂದಿದೆ. ಹಲವು ವೈಶಿಷ್ಟ್ಯಗಳ ಪರಂಪರಾಗತ ತಳಿಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಕೃಷಿ ವಿಶ್ವವಿದ್ಯಾಲಯದ ಜೋಳ ಸಂಶೋಧನಾ ಯೋಜನೆ ಮುಖ್ಯಸ್ಥ ಡಾ. ಎನ್.ಜಿ. ಹನುಮರಟ್ಟಿ ಮಾತನಾಡಿ, 2 ದಶಕಗಳಿಂದ ವಿಶ್ವವಿದ್ಯಾಲಯ ಮಟ್ಟದಲ್ಲಿ ದೇಸಿ ಭತ್ತ ಸಂರಕ್ಷಣೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮಳೆಯಾಶ್ರಿತ ಭತ್ತದ ತಳಿಗಳು ಸಾಕಷ್ಟು ಇದ್ದವು. ಅವುಗಳನ್ನು ರೈತರು ಬೆಳೆಯಲು ಉದಾಸೀನ ತೋರಿದ್ದರಿಂದ ತಳಿಗಳು ಕಾಣೆಯಾಗುವ ಹಂತ ತಲುಪಿದ್ದವು. ಈಗ ಮತ್ತೆ ಅವುಗಳನ್ನು ರೈತರಿಗೆ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಿ ಕೊಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪೀಪಲ್ ಫಸ್ಟ್ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರಕಾಶ ಭಟ್ ಮಾತನಾಡಿ, ಬೇಸಾಯ ಸಂಸ್ಕೃತಿಯ ಜೀವಾಳ ಎನಿಸಿರುವ ಸಾಂಪ್ರದಾಯಿಕ ಬೀಜ ಸಂಪತ್ತಿಗೆ ಧಕ್ಕೆ ಎದುರಾಗಿದೆ. ಇದರಿಂದ ಉದ್ಭವಿಸಿರುವ ಕೃಷಿ ಬಿಕ್ಕಟ್ಟನ್ನು ಎದುರಿಸಲು ದೇಸಿ ತಳಿಗಳಿಗೆ ಆದ್ಯತೆ ನೀಡಬೇಕು ಎಂದರು.
ಜವಾರಿ ತಳಿ ಪ್ರದರ್ಶನ: ಮೇಳದಲ್ಲಿ 10ಕ್ಕೂ ಹೆಚ್ಚು ಬೀಜ ಸಂರಕ್ಷಕರ ಗುಂಪುಗಳು ಪಾಲ್ಗೊಂಡಿವೆ. ವಿವಿಧ ಜವಾರಿ ತಳಿಗಳನ್ನು ಪ್ರದರ್ಶಿಸಲಾಗುತ್ತಿದ್ದು, ಧಾನ್ಯ, ತರಕಾರಿ, ಕಾಳು, ಗೆಡ್ಡೆ ಗೆಣಸು, ಸೊಪ್ಪು ಮತ್ತು ಹಣ್ಣಿನ ತಳಿಗಳು ಪ್ರದರ್ಶನಕ್ಕಿವೆ. ಗುಣಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜಗಳು ಮಾರಾಟಕ್ಕೆ ಲಭ್ಯ ಇದ್ದು, ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟ ನಡೆಯುತ್ತಿದೆ. ಭಾನುವಾರವೂ ಮೇಳ ಮುಂದುವರಿಯಲಿದೆ.