

ವಿರೂಪಾಕ್ಷಯ್ಯ ಗುದ್ನಯ್ಯನವಮಠ ಹುಬ್ಬಳ್ಳಿ
ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳ ಉಪನ್ಯಾಸಕರು ಮತ್ತು ಪ್ರಾಚಾರ್ಯರ ಒಟ್ಟು 256 ಹುದ್ದೆಗಳು ಖಾಲಿ ಇದ್ದು, ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ತೀವ್ರ ತೊಂದರೆಯಾಗಿದೆ.
ಜಿಲ್ಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು 29 ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳು 39 ಇವೆ. ಸರ್ಕಾರಿ ಪಪೂ ಕಾಲೇಜುಗಳಿಗೆ ವಿವಿಧ ವಿಷಯ ಉಪನ್ಯಾಸಕರ 258 ಹುದ್ದೆಗಳು, 29 ಪ್ರಾಚಾರ್ಯರ ಹುದ್ದೆ ಸೇರಿ ಒಟ್ಟು 287 ಹುದ್ದೆಗಳು ಮಂಜೂರಾಗಿವೆ. 181 ಉಪನ್ಯಾಸಕರು, 15 ಪ್ರಾಚಾರ್ಯರು ಕಾರ್ಯನಿರ್ವಹಿಸುತ್ತಿದ್ದು, 14 ಪ್ರಾಚಾರ್ಯರು ಹಾಗೂ 77 ಉಪನ್ಯಾಸಕರ ಹುದ್ದೆ ಖಾಲಿ ಇವೆ.
ಅದೇ ರೀತಿ ಅನುದಾನಿತ ಪಪೂ ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಸೇರಿ ಒಟ್ಟು 497 ಹುದ್ದೆಗಳು ಮಂಜೂರಾಗಿದ್ದು, 255 ಬೋಧಕ-ಬೋಧಕೇತರ ಸಿಬ್ಬಂದಿ ಕರ್ತವ್ಯದಲ್ಲಿದ್ದು, ಒಟ್ಟು 242 ಹುದ್ದೆಗಳು ಖಾಲಿ ಇವೆ. ಅನುದಾನಿತ ಕಾಲೇಜುಗಳಲ್ಲಿ ಪ್ರಾಚಾರ್ಯರ 9 ಹುದ್ದೆ ಮಂಜೂರಾಗಿದ್ದು, 6 ಹುದ್ದೆ ಭರ್ತಿ ಇವೆ. ಮೂರು ಹುದ್ದೆ ಖಾಲಿ ಇವೆ. ವಿವಿಧ ವಿಷಯಗಳ 345 ಉಪನ್ಯಾಸಕರ ಹುದ್ದೆ ಮಂಜೂರಾಗಿದ್ದು, 191 ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, 154 ಹುದ್ದೆ ಖಾಲಿ ಇವೆ. ದೈಹಿಕ ಶಿಕ್ಷಣ ಉಪನ್ಯಾಸಕರ ಹುದ್ದೆ 14 ಮಂಜೂರಾಗಿದ್ದು, 6 ಹುದ್ದೆ ಭರ್ತಿ ಇವೆ. ಎಂಟು ಹುದ್ದೆ ಖಾಲಿ ಇವೆ. ಇನ್ನು ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿ.ದ.ಸ. ಕ್ಲರ್ಕ್ ಕಮ್ ಟೈಪಿಸ್ಟ್, ಅಟೆಂಡರ್ ಹಾಗೂ ಗ್ರುಪ್-ಡಿ ಸೇರಿ ಬೋಧಕೇತರ 77 ಹುದ್ದೆಗಳು ಖಾಲಿ ಇವೆ.
2015ರ ಬಳಿಕ ಅನುಮತಿ ನೀಡಿಲ್ಲ:
ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 2013ರಿಂದ 2015ರ ಡಿಸೆಂಬರ್ 31ರವೆಗೆ ನಿಧನ, ನಿವೃತ್ತಿ ಮತ್ತಿತರ ಕಾರಣಗಳಿಂದ ಖಾಲಿ ಇರುವ ಬೋಧಕರ ಹುದ್ದೆಗಳನ್ನು ತುಂಬಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಈಗ 9 ವರ್ಷ ಗತಿಸಿದವರೂ ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ನೀಡುತ್ತಿಲ್ಲ. ಇದರಿಂದ ಮಕ್ಕಳ ಬೋಧನೆಗೆ ತೊಂದರೆ ಆಗುತ್ತಿದೆ.
ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರ ಸಹಯೋಗದಲ್ಲಿ ವಿವಿಧ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಅನುದಾನಿತ ಕಾಲೇಜುಗಳ ಉಪನ್ಯಾಸಕರ ಖಾಲಿ ಹುದ್ದೆಗಳ ಕುರಿತು ಇಲಾಖೆಗೆ ಮಾಹಿತಿ ನೀಡಲಾಗಿದೆ. ಹುದ್ದೆ ಭರ್ತಿಗೆ ಅನುಮತಿ ಸಿಗುತ್ತಿದ್ದಂತೆ ನೇಮಕಾತಿ ಮಾಡಲಾಗುವುದು. | ಕೆ.ಪಿ. ಸುರೇಶ ಉಪನಿರ್ದೇಶಕ ಪದವಿಪೂರ್ವ ಶಿಕ್ಷಣ ಇಲಾಖೆ ಧಾರವಾಡ ಅನುದಾನಿತ ಪಪೂ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆ ಭರ್ತಿಗೆ ಸರ್ಕಾರ ಶೀಘ್ರ ಅನುಮತಿ ನೀಡಬೇಕು. ಇಲ್ಲದಿದ್ದರೆ ಅನುದಾನಿತ ಕಾಲೇಜುಗಳು ತುಂಬಾ ತೊಂದರೆಗೆ ಒಳಗಾಗಲಿವೆ. ಕೆಲ ಕಾಲೇಜ್ಗಳಲ್ಲಿ ಒಬ್ಬರೂ ಕಾಯಂ ಉಪನ್ಯಾಸಕರಿಲ್ಲದಂಥ ಸ್ಥಿತಿಯಿದೆ. ಇಂಥ ಕಾಲೇಜುಗಳಲ್ಲಿ ಮಕ್ಕಳ ಕಲಿಕೆಗೆ ಹಿನ್ನಡೆ ಆಗುತ್ತದೆ. ಹೀಗಾಗಿ, ಸರ್ಕಾರ ಬೇಗ ಅನುಮತಿ ನೀಡಬೇಕು.| ಸಂದೀಪ ಬೂದಿಹಾಳ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪಪೂ ಕಾಲೇಜುಗಳ ಪ್ರಾಚಾರ್ಯರ ಸಂಘ ಗ್ರಾಮೀಣ ಭಾಗದ ಬಹುತೇಕ ಅನುದಾನಿತ ಪಪೂ ಕಾಲೇಜುಗಳಲ್ಲಿ ಒಬ್ಬರು ಅಥವಾ ಇಬ್ಬರು ಕಾಯಂ ಉಪನ್ಯಾಸಕರಿದ್ದಾರೆ. ಇದು ಕಲಿಕೆ ಮತ್ತು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಇನ್ನುಳಿದ ವಿಷಯಗಳಿಗೆ ಗೌರವ ಉಪನ್ಯಾಸಕರೇ ಪಾಠ ಮಾಡುತ್ತಿದ್ದಾರೆ. ಸರ್ಕಾರ ಹುದ್ದೆ ಭರ್ತಿಗೆ ಬೇಗ ಅನುಮತಿ ನೀಡಿದರೆ ವಯೋಮಿತಿ ಮೀರುತ್ತಿರುವ ನಿರುದ್ಯೋಗ ಪದವೀಧರರಿಗೂ ಅನುಕೂಲವಾಗಲಿದೆ.| ಸುರೇಶ ಮರಲಿಂಗಣ್ಣವರ ಪ್ರಾಚಾರ್ಯ, ಸಿಇಎಸ್ಎಸ್ಜೆ ಪಪೂ ಕಾಲೇಜ್ ಮಿಶ್ರಿಕೋಟಿ
ಅತಿಥಿ ಉಪನ್ಯಾಸಕರ ನೇಮಕ
ಜಿಲ್ಲೆಯ ಕುಂದಗೋಳ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಧಾರವಾಡ, ಹುಬ್ಬಳ್ಳಿ ತಾಲೂಕಿನ ವಿವಿಧ ಸರ್ಕಾರಿ ಪಪೂ ಕಾಲೇಜ್ಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ 63 ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಆಯಾ ಕಾಲೇಜಿನ ಪ್ರಾಚಾರ್ಯರ ಹಂತದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.