

ಧಾರವಾಡ: ಉದ್ದಿಮೆಗಳ ಸ್ಥಿತಿಗತಿ ಪರಿಶೀಲನೆಗಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಮತ್ತು ಬೇಲೂರು ಕೈಗಾರಿಕಾ ಪ್ರದೇಶ ಹಾಗೂ ಗಾಮನಗಟ್ಟಿ ಕೈಗಾರಿಕಾ ಪ್ರದೇಶಗಳಲ್ಲಿರುವ ವಿವಿಧ ಉದ್ದಿಮೆಗಳಿಗೆ ಸೋಮವಾರ ಭೇಟಿ ನೀಡಿದರು. ಸರ್ಕಾರ ಉದ್ದಿಮೆಗಳ ಪುನಃಶ್ಚೇತನಕ್ಕೆ ಒತ್ತು ನೀಡಲಿದೆ ಎಂದು ಭರವಸೆ ನೀಡಿದರು.
ಗಾಮನಗಟ್ಟಿಯ ಇನ್‌ಫ್ರಾ ೈನ್ ುಡ್ಸ್‌ಗೆ ಭೇಟಿ ನೀಡಿದ ಸಚಿವರು, ವಿವಿಧ ಹಣ್ಣುಗಳ ತಿರುಳನ್ನು ತೆಗೆದು ಅಚ್ಚುಕಟ್ಟಾಗಿ ಅಮೆರಿಕ, ಜಪಾನ್ ಮತ್ತು ಯೂರೋಪಿಯನ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದರು. ಕಂಪನಿ ಕೆಲವೇ ವರ್ಷಗಳಲ್ಲಿ 100 ಕೋಟಿ ರೂ. ಮೊತ್ತದ ರಫ್ತು ವಹಿವಾಟು ನಡೆಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿ, ಮಾವು, ಪೇರಲ, ಅನಾನಸ್ ಸೇರಿ ಇತರ ಹಣ್ಣುಗಳನ್ನು ನೇರವಾಗಿ ರೈತರಿಂದ ಖರೀದಿಸಿ, ಇಂತಹ ಉದ್ದಿಮೆ ಸ್ಥಾಪಿಸಿರುವುದು ಸ್ವಾಗತಾರ್ಹ. ಇದರಿಂದ ರೈತರಿಗೂ ಲಾಭವಾಗಲಿದೆ. ಮಾರುಕಟ್ಟೆಯಲ್ಲಿ ಹಣ್ಣುಗಳ ಬೆಲೆ ಕುಸಿದರೂ ಇಂತಹ ಕಂಪನಿಗಳನ್ನು ನೆಚ್ಚಿಕೊಳ್ಳಬಹುದು ಎಂದರು.
ನಂತರ ದೀರ್ಕಾಲಿಕ ಬಳಕೆಗೆ ಬರುವ ಉತ್ಪನ್ನ ತಯಾರಿಸುವ ಏಕಸ್ ಉದ್ಯಮಕ್ಕೆ ಭೇಟಿ ನೀಡಿದರು. ಕೆಐಎಡಿಬಿ ಒದಗಿಸಿರುವ 300 ಎಕರೆ ಭೂಮಿಯಲ್ಲಿ ಸ್ವತಃ ಕಂಪನಿಯೇ ಎಸ್‌ಇಜೆಡ್ ಅಭಿವೃದ್ಧಿಪಡಿಸಿ, ವಿವಿಧ ಉದ್ದಿಮೆಗಳಿಗೆ ಸ್ಥಳಾವಕಾಶ ನೀಡುತ್ತಿರುವುದನ್ನು ವೀಕ್ಷಿಸಿದರು.
ಬಳಿಕ ಇಟ್ಟಿಗಟ್ಟಿಯಲ್ಲಿರುವ ಧಾರವಾಡ ಎಸ್‌ಇಜೆಡ್ ವಲಯದ ಮೈಕ್ರೋಫಿನಿಷ್ ವಾಲ್ವ್ ಕಂಪನಿಗೆ ಭೇಟಿ ನೀಡಿದರು. ಇಲ್ಲಿ ತಯಾರಿಸುವ ಬೃಹತ್ ಗಾತ್ರದ, ಔದ್ಯಮಿಕ ಬಳಕೆಗೆ ಬರುವ ವಾಲ್ವೃ್ಗಳ ಬಗ್ಗೆ ಪ್ರತಿನಿಧಿಗಳಿಂದ ಮಾಹಿತಿ ಪಡೆದರು. ಬೇಲೂರು ಕೈಗಾರಿಕಾ ಪ್ರದೇಶಕ್ಕೆ ತೆರಳಿ ಬಿಸ್ಕತ್, ಮ್ಯಾಗಿ ಸೇರಿ ವಿವಿಧ ಆಹಾರ ಉತ್ಪನ್ನಗಳ ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್ ಕಾಗದ ತಯಾರಿಸುವ ಯೂಫ್ಲೆಕ್ಸ್ ಕಂಪನಿಗೆ ಭೇಟಿ ನೀಡಿದರು. ಉತ್ತರ ಕರ್ನಾಟಕದಲ್ಲಿ ಇಂತಹ ಉದ್ದಿಮೆಗಳು ಹೆಚ್ಚಾಗಬೇಕು ಎಂದರು.
ಕೆಐಎಡಿಬಿ ಆಯುಕ್ತ ಮಹೇಶ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು, ಎನ್‌ಜಿಇಎಫ್ ಉಪ ಮಹಾವ್ಯವಸ್ಥಾಪಕ ಎಸ್.ಎಸ್. ನರೇಗಲ್ ಮತ್ತು ಕೈಗಾರಿಕೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.