

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಾವೇರಿ ಜಿಲ್ಲೆ ಬೇರ್ಪಟ್ಟ ಬಳಿಕ ಮೊಟ್ಟ ಮೊದಲ ಬಾರಿಗೆ ನಡೆದ ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೆಎಂಎಫ್)ದ ಆಡಳಿತ ಮಂಡಳಿತ ನಿರ್ದೇಶಕರ ಚುನಾವಣೆಯಲ್ಲಿ 8 ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಒಕ್ಕೂಟದ ಒಟ್ಟು 9 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ (ಗದಗ ಮತ್ತು ನರಗುಂದ ತಾಲೂಕಿನಿಂದ ಹನುಮಂತಗೌಡ ಹಿರೇಗೌಡರ) ಅವಿರೋಧ ಆಯ್ಕೆ ಹಿನ್ನೆಲೆಯಲ್ಲಿ ಉಳಿದ 8 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಸಲಾಗಿತ್ತು. ಧಾರವಾಡ, ಅಳ್ನಾವರ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ಮತಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದ, ಅಧ್ಯಕ್ಷರಾಗಿದ್ದ ಶಂಕರ ಮುಗದ (78 ಮತಗಳು) ಅವರು ಹೇಮರಡ್ಡಿ ನಾಗರಡ್ಡಿ ಲಿಂಗರಡ್ಡಿ (4) ವಿರುದ್ಧ 74 ಮತಗಳಿಂದ ಭರ್ಜರಿ ಜಯಗಳಿಸುವ ಮೂಲಕ 5ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕಲಘಟಗಿ ತಾಲೂಕು ಮತಕ್ಷೇತ್ರದಿಂದ ಸ್ಪಧಿರ್ಸಿದ್ದ ಗೀತಾ ಸುರೇಶ ಮರಲಿಂಗಣ್ಣವರ (21) ಅವರು ಹನುಮಂತಪ್ಪ ಕೊರವರ (17) ಎದುರು 4 ಮತಗಳ ಅಂತರದಿಂದ ಜಯಗಳಿಸಿದರೆ, ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ತಾಲೂಕು ಮತಕ್ಷೇತ್ರದಿಂದ ಗಂಗಪ್ಪ ಮೂಕಪ್ಪ ಮೊರಬದ (31) ವಿರುದ್ಧ ಸುರೇಶ ಬಣವಿ (36) ಅವರು 5 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಗದಗ ಜಿಲ್ಲೆಯ ರೋಣ ಮತ್ತು ಗಜೇಂದ್ರಗಡ ತಾಲೂಕು ಮತಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದ ನೀಲಕಂಠ ಅಸೂಟಿ (29) ಅವರು ಗದಿಗೆಪ್ಪ ಕಿರೇಸೂರ (13) ವಿರುದ್ಧ 16 ಮತಗಳ ಅಂತರದಲ್ಲಿ ಜಯಗಳಿಸಿದ್ದರೆ, ಮುಂಡರಗಿ, ಶಿರಹಟ್ಟಿ ಮತಕ್ಷೇತ್ರದಿಂದ ಲಿಂಗರಾಜಗೌಡ ಹನುಮಂತಗೌಡ ಪಾಟೀಲ (50) ಅವರು ಶೇಖಣ್ಣ ಕಾಳೆ (19) ವಿರುದ್ಧ 31 ಮತಗಳ ಅಂತರಿಂದ ಜಯಗಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಮತಕ್ಷೇತ್ರದಿಂದ ಸುರೇಶ್ಚಂದ್ರ ಹೆಗಡೆ (70) ಉಮಾಮಹೇಶ್ವರ ಕೇಶವ ಹೆಗಡೆ (14) ವಿರುದ್ಧ 56 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕು ಮತಕ್ಷೇತ್ರದಿಂದ ಪರಶುರಾಮ ನಾಯ್ಕ (37) ಅವರು ಸಾಧನಾ ಭಟ್ಟ (27) ವಿರುದ್ಧ 10 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಯಲ್ಲಾಪುರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ತಾಲೂಕು ಮತಕ್ಷೇತ್ರದಿಂದ ಶಂಕರ ಪರಮೇಶ್ವರ ಹೆಗಡೆ (66) ಅವರು ಪ್ರಶಾಂತ ಸುಬ್ರಾಯ ಸಭಾಹಿತರ ವಿರುದ್ಧ 42 ಮತಗಳ ಅಂತರದಲ್ಲಿ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ 8 ಮತಕ್ಷೇತ್ರಗಳ ಒಟ್ಟು 555 ಮತದಾರರ ಪೈಕಿ 546 ಜನರು ಮತ ಚಲಾಯಿಸಿದ್ದರು. ಈ ಪೈಕಿ 1 ಮತ ಮಾತ್ರ ಕುಲಗಟ್ಟ ಮತವಾಗಿದ್ದರೆ, ಉಳಿದ ಮತಗಳು ಸಿಂಧುತ್ವ ಹೊಂದಿದ್ದವು ಎಂದು ಚುನಾವಣಾಧಿಕಾರಿ ಡಾ. ಸಂತೋಷ ಬಿರಾದಾರ ತಿಳಿಸಿದ್ದಾರೆ.