

ಕುಂದಗೋಳ: ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಿಸದೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಬಿಳೆಬಾಳ ಗ್ರಾಮದ ಗ್ರಾಮಸ್ಥರು ಗ್ರಾಮದ ನ್ಯಾಯಬೆಲೆ ಅಂಗಡಿ ಎದುರು ಶನಿವಾರ ಪ್ರತಿಭಟಿಸಿದರು.
ಗ್ರಾಮದ ನ್ಯಾಯಬೆಲೆ ಅಂಗಡಿಕಾರ ಬಿ.ಜಿ. ಪಾಟೀಲ ಅವರು 62 ಪಡಿತರ ಚೀಟಿದಾರರಿಗೆ ಆಗಸ್ಟ್ ತಿಂಗಳ ಪಡಿತರ ವಿತರಿಸಿರಲಿಲ್ಲ. ಇದನ್ನು ಕಾರ್ಡ್ದಾರರು ಕೇಳಲು ಹೋದಾಗ, ಅಂಗಡಿಕಾರ ರೇಷನ್ ಖಾಲಿಯಾಗಿದೆ ಎಂದು ಸಬೂಬು ನೀಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಗೋದಾಮು ಪರಿಶೀಲಿಸಿದಾಗ ಅಲ್ಲಿ ಅಕ್ಕಿಯೂ ಇರಲಿಲ್ಲ. ಕಾರ್ಡ್ದಾರರಿಗೂ ವಿತರಿಸಿಲ್ಲ. ಹಾಗಾದರೆ ಅಕ್ಕಿ ಎಲ್ಲಿ ಹೋಯಿತು ಎಂದು ದಿಢೀರನೇ ಪ್ರತಿಭಟನೆ ಆರಂಭಿಸಿ, ಸ್ಥಳಕ್ಕೆ ಆಹಾರ ನಿರೀಕ್ಷಕರು ಬರಬೇಕು ಎಂದು ಪಟ್ಟು ಹಿಡಿದರು.
ಸ್ಥಳೀಯ ನ್ಯಾಯಬೆಲೆ ಅಂಗಡಿಕಾರ ಎಲ್ಲರಿಗೂ ಹಾಗೂ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಗಳಕ್ಕೆ ಮುಂದಾಗುತ್ತಾನೆ. ಪಡಿತರ ವಿತರಿಸಲು ಸರ್ವರ್ ಸಮಸ್ಯೆ ಎಂದು ಅನವಶ್ಯಕವಾಗಿ ಓಡಾಡಿಸುತ್ತಾನೆ. ಕಳೆದ 20 ವರ್ಷದಿಂದ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಬಿ.ಜಿ. ಪಾಟೀಲ, ಬಿಳೆಬಾಳ ಗ್ರಾಮದ 49 ಅಂತ್ಯೋದಯ ಕಾರ್ಡ್ ಹಾಗೂ 337 ಬಿಪಿಎಲ್ ಕಾರ್ಡ್ದಾರರಿಗೆ ರೇಷನ್ ವಿತರಿಸುವಾಗ ಹಲವು ವರ್ಷಗಳಿಂದ ಪ್ರತಿ ಕಾರ್ಡ್ಗೆ 1 ಕೆಜಿ ಅಕ್ಕಿ ಕಡಿತ ಮಾಡುತ್ತಾ ಬಂದಿದ್ದಾನೆ. ಈ ತಿಂಗಳು 62 ಪಡಿತರ ಚೀಟಿದಾರರಿಗೆ ಅಕ್ಕಿಯನ್ನೆ ನೀಡಿಲ್ಲ. ಈ ಅಕ್ಕಿಯನ್ನು ಅಂಗಡಿಕಾರ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದು, ಕೂಡಲೇ ಈತನ ಪರವಾನಗಿ ರದ್ದು ಮಾಡಬೇಕು ಎಂದು ಗ್ರಾಮಸ್ಥರಾದ ಸರೋಜವ್ವ ಚಲವಾದಿ, ಇಸ್ಮಾಯಿಲ್ಸಾಬ್ ಕಿಲ್ಲೇದಾರ, ಶಂಕ್ರಪ್ಪ ಚಲವಾದಿ, ರಾಜೇಸಾಬ ಕಿಲ್ಲೇದಾರ, ರಮೇಶ ಚಲವಾದಿ ಸೇರಿದಂತೆ ಅನೇಕರು ಆಗ್ರಹಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂದಗೋಳ ಆಹಾರ ನಿರೀಕ್ಷಕ ಶಂಕರ ಜೋಶಿ, 62 ಕುಟುಂಬಗಳಿಗೆ ಪಡಿತರ ಕೊಡಿಸುತ್ತೇನೆ. ನ್ಯಾಯಬೆಲೆ ಅಂಗಡಿಕಾರನ ವರ್ತನೆ ಸರಿಯಾಗಿಲ್ಲ. ಅವರನ್ನು ಬದಲಾವಣೆ ಮಾಡಿ ಎಂದು ಗ್ರಾಮಸ್ಥರು ಪತ್ರದ ಮೂಲಕ ದೂರು ನೀಡಿದ್ದಾರೆ. ಅದರಂತೆ ಮೇಲಧಿಕಾರಿಗಳಿಗೆ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.
ಗ್ರಾಮದ ಶರೀಫಸಾಬ್ ಕಿಲ್ಲೇದಾರ, ಬಸನಗೌಡ ಕ್ರಿಷ್ಟಗೌಡ್ರ, ಅಬ್ದುಲ್ ಕಿಲ್ಲೇದಾರ, ಹಜರೇಸಾಬ್ ಹುಡೇದ, ನಾಸೀರಸಾಬ್ ಕಿಲ್ಲೇದಾರ, ನಾಗನಗೌಡ ಹಿರೇಗೌಡ್ರ, ಶಂಕ್ರಪ್ಪ ಚಲವಾದಿ, ಹನುಮಂತಪ್ಪ ಚಲವಾದಿ, ನಾಸೀರ್ಅಹ್ಮದ್ ಕಿಲ್ಲೇದಾರ, ಈರಪ್ಪ ಸನದಿ, ಬಸವಣ್ಣಪ್ಪ ಚಲವಾದಿ ಇತರರು ಇದ್ದರು.