

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯವು ಸೆ. 9ರಿಂದ 12ರವರೆಗೆ ಆಯೋಜಿಸಿರುವ ಕೃಷಿ ಮೇಳದ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ. ಕೃಷಿ ವಿಶ್ವವಿದ್ಯಾಲಯದ ಆವರಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಈ ಬಾರಿಯ ಕೃಷಿ ಮೇಳವನ್ನು `ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು' ಶೀರ್ಷಿಕೆಯಡಿ ಆಯೋಜಿಸಲಾಗುತ್ತಿದೆ.
ಸೆ. 9ರಂದು ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿರುವ ಫಲಪುಷ್ಪ ಮತ್ತು ಕೀಟ ಪ್ರಪಂಚ ಪ್ರದರ್ಶನ ಉದ್ಘಾಟಿಸುವರು. ೧೨.೧೫ಕ್ಕೆ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸುವರು. ೧೨.೩೦ ಗಂಟೆಗೆ ಕೃಷಿ ಮೇಳದ ಮುಖ್ಯ ವೇದಿಕೆಯಲ್ಲಿ ಕೃಷಿ ಮೇಳವನ್ನು ಉದ್ಘಾಟಿಸುವರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ ಗೌರವ ಉಪಸ್ಥಿತರಿರುವರು. ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ನಾಲ್ಕು ದಿನಗಳ ಮೇಳದಲ್ಲಿ ಸಾವಯವ ಕೃಷಿ ಬೆಳೆಗಳು, ಸಿರಿಧಾನ್ಯ ಮಳಿಗೆಗಳು, ಉತ್ಪಾದನೆಯ ಬಗೆ, ಅವುಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಕುರಿತ ಮಾಹಿತಿ ಸಿಗಲಿದೆ. ಸಿರಿಧಾನ್ಯ ಮತ್ತು ಸಾವಯವ ಕೃಷಿ ಸಾಧಕರ ಮಳಿಗೆಗಳು ಇರಲಿದ್ದು, ಮಾಹಿತಿ ವಿನಿಮಯಕ್ಕೆ ವೇದಿಕೆ ಸಿಗಲಿದೆ. ಜೈವಿಕ ಗೊಬ್ಬರದ ಬಳಕೆಯಿಂದಾಗುವ ಪ್ರಯೋಜನ ಹಾಗೂ ಪೀಡೆನಾಶಕಗಳ ಬಗ್ಗೆ ತಜ್ಞರಿಂದ ಮಾಹಿತಿ ಲಭ್ಯವಾಗಲಿದೆ. ಮಳೆ ನೀರಿನ ಕೊಯ್ಲು ಮತ್ತು ಅಂತರ್ಜಲ ಮರುಪೂರಣ. ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ ಮಳೆನೀರನ್ನು ಸಂರಕ್ಷಿಸಿ ಮರುಬಳಕೆಗೆ ಉತ್ತೇಜಿಸುವ ಯತ್ನ ಮೇಳದಲ್ಲಿ ನಡೆಯಲಿದೆ.
ಕೃಷಿ ವಸ್ತು ಪ್ರದರ್ಶನದಲ್ಲಿ ೫೦ ಜಾನುವಾರು ಪ್ರದರ್ಶನ ಮಳಿಗೆಗಳು, ೨೪ ಯಂತ್ರೋಪಕರಣ ಮಳಿಗೆಗಳು, ೩೫೧ ಸಾಮಾನ್ಯ ಮಳಿಗೆ, ೧೯೮ ಹೈಟೆಕ್ ಮಳಿಗೆ, ೪೦ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿದೆ.