

ವಿಕ್ರಮ ನಾಡಿಗೇರ ಧಾರವಾಡ
ಜನರು ಎಲ್ಲೆಂದರಲ್ಲಿ ಕಸ ಬಿಸಾಕುವುದನ್ನು ತಪ್ಪಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಂದು ಹಂತದ ಯಶ ಕಂಡಿದೆ. ಆದರೆ, ಸಂಪೂರ್ಣ ಪರಿಹಾರ ಹುಡುಕುವಲ್ಲಿ ವಿಫಲವಾಗಿದೆ. ಇದಕ್ಕೆ ಖಾಲಿ ನಿವೇಶನಗಳೇ ಜ್ವಲಂತ ಸಾಕ್ಷಿ.
ಅವಳಿ ನಗರದಲ್ಲಿ ಖಾಲಿ ನಿವೇಶನಗಳಿಗೆ ಬರ ಇಲ್ಲ. ಬಹುತೇಕ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳು ಡಂಪಿಂಗ್ ಯಾರ್ಡ್ ಆಗಿವೆ. ಆಳೆತ್ತರ ಗಿಡ-ಗಂಟಿ ಬೆಳೆದು ವಿಷ ಜಂತುಗಳ ವಾಸಸ್ಥಾನ ಆಗಿವೆ. ಅಕ್ಕಪಕ್ಕದ ನಿವಾಸಿಗಳು ಭಯದಲ್ಲೇ ಜೀವನ ಸಾಗಿಸುವಂತಾಗಿದೆ. ಅನೇಕರು ನಿವೇಶನ ಖರೀದಿಸಿ ವಿದೇಶ, ಅನ್ಯ ರಾಜ್ಯ, ಹೀಗೆ ಬೇರೆ ಕಡೆ ವಾಸವಾಗಿದ್ದಾರೆ. ನಿವೇಶನವನ್ನು ಸ್ವಚ್ಛಗೊಳಿಸುವಲ್ಲಿ ನಿರಾಸಕ್ತಿ ವಹಿಸುತ್ತಿದ್ದರೆ, ಕಸ, ತ್ಯಾಜ್ಯ ಎಸೆಯಲು ಈ ಜಾಗಗಳು ಜನರಿಗೆ ಪ್ರಶಸ್ತ ತಾಣವಾಗಿವೆ. ಕಸದ ರಾಶಿಯಿಂದ ತುಂಬಿರುವ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಡಬೇಕು ಎಂದು ಪಾಲಿಕೆಯು ಮಾಲೀಕರಿಗೆ ಎಚ್ಚರಿಕೆ ನೀಡಿತ್ತು. ಆದರೂ ಮಾಲೀಕರು ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಬೇಸತ್ತ ಪಾಲಿಕೆಯೇ ನಿವೇಶನ ಸ್ವಚ್ಛಗೊಳಿಸಿ ಅದರ ವೆಚ್ಚವನ್ನು ಮಾಲೀಕರ ಆಸ್ತಿ ಕರದಲ್ಲಿ ಸೇರಿಸಲು ಮುಂದಾಗಿತ್ತು. ಆದರೆ, ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ, ಪಾಲಿಕೆ ನಿರ್ಧಾರ ಪ್ರಚಾರಕ್ಕೆ ಸೀಮಿತವೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಖಾಲಿ ನಿವೇಶನ ಸ್ವಚ್ಛಗೊಳಿಸಿದರೆ ಅದರ ಖರ್ಚನ್ನು ಮಾಲೀಕರ ಆಸ್ತಿ ಕರ ಬಾಬತ್ತಿಗೆ ಸೇರಿಸುವ ಪ್ರಯತ್ನ ನಡೆದಿತ್ತು. ಪಾಲಿಕೆಯ ಆಯುಕ್ತರು ವರ್ಗವಾಗಿದ್ದು, ನೂತನ ಆಯುಕ್ತರು ಬಂದ ಬಳಿಕ ಈ ವಿಷಯವಾಗಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.ವೀಣಾ ಬರದ್ವಾಡ ಮೇಯರ್
ಇದು ಮಾದರಿ ಕೆಲಸ
ಅವಳಿನಗರದ ಕೆಲ ಬಡಾವಣೆಗಳಲ್ಲಿ ನಿವೇಶನದ ಅಕ್ಕಪಕ್ಕದ ನಿವಾಸಿಗಳೇ ನಿವೇಶನವನ್ನು ಸ್ವಚ್ಛಗೊಳಿಸಿ ವಾಹನಗಳ ನಿಲುಗಡೆ ಸ್ಥಳ ಮಾಡಿಕೊಂಡಿದ್ದಾರೆ. ಇದು ಮಾಲೀಕರಿಗೂ ಅನುಕೂಲವಾಗಿದೆ. ನಿವೇಶನ ಸ್ವಚ್ಛ ಇರುವುದು ಒಂದೆಡೆಯಾದರೆ, ಪಾಲಿಕೆ ನೋಟಿಸ್, ದಂಡದಿಂದ ತಪ್ಪಿಸಿಕೊಳ್ಳಲು ಸುಲಭ ಮಾರ್ಗವಾಗಿದೆ.
ಅಡಗು ತಾಣ
ಇತ್ತೀಚಿನ ದಿನಗಳಲ್ಲಿ ಅವಳಿ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿ ಕಳ್ಳತನ ಕೃತ್ಯಕ್ಕೆ ಮುಂದಾಗುವ ಕಳ್ಳರಿಗೆ ಖಾಲಿ ನಿವೇಶನಗಳಲ್ಲಿನ ಗಿಡ-ಗಂಟಿಗಳ ಮರೆಯಲ್ಲಿ ಅಡಗಿ ಕುಳಿತುಕೊಳ್ಳಲು ಸೂಕ್ತ ಜಾಗ ಎಂಬಂತಾಗಿದೆ. ಕೆಲ ದಿನಗಳ ಹಿಂದೆ ಧಾರವಾಡದ ಮಾಳಮಡ್ಡಿಯಲ್ಲಿ ಜನರ ಕೈಗೆ ಸಿಕ್ಕಿಬಿದ್ದ ಕಳ್ಳರು, ಇಂತಹ ಜಾಗದಲ್ಲೇ ಅಡಗಿ ಕುಳಿತುಕೊಂಡಿದ್ದರು.