

ಧಾರವಾಡ: ಸಾಂಸ್ಕೃತಿಕ ನಗರಿ ಧಾರವಾಡದ ಹೆಮ್ಮೆ ಕಲಾಭವನ ದುರಸ್ತಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಶಾಸಕ ಅರವಿಂದ ಬೆಲ್ಲದ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಇತ್ತೀಚಿನ ಮಳೆಗೆ ಸೋರಿಕೆಯಾಗಿ ಕಲಾಭವನ ಒಳಗಿನ ಪಿಒಪಿ ಕಳಚಿ ಬಿದ್ದಿದೆ. ನಿರ್ವಹಣೆ ಇಲ್ಲದೇ ಹಾಳಾಗಿರುವ ಭವನ ಕೆಲ ದಿನಗಳಿಂದ ಬಳಕೆಯಾಗಿರಲಿಲ್ಲ. ಕಲೆ, ಸಂಸ್ಕೃತಿ ಬೆಳೆಸುವ ದಿಸೆಯಲ್ಲಿ ನಗರದ ಮಧ್ಯಭಾಗದಲ್ಲಿರುವ ಕಲಾಭವನ ದುರಸ್ತಿ ಅತ್ಯಂತ ತುರ್ತು ಅಗತ್ಯವಾಗಿದೆ.
ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪಾಲಿಕೆ ಸದಸ್ಯ ಸುರೇಶ ಹಾಗೂ ಕಲಾಪ್ರೇಮಿಗಳು ಸೇರಿ ಕಲಾ ಭವನ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ ಅವರು, ಕಳೆದ ಕೆಲ ದಿನಗಳಿಂದ ನಿರ್ವಹಣೆ ಇಲ್ಲದೇ ಕಲಾಭವನವು ಹಾಳಾಗಿದೆ. ಮಳೆ ನೀರು ಸೋರಿಕೆಯಿಂದಾಗಿ ಒಳಗಡೆ ಪಿಒಪಿ ಕಳಚಿ ಬಿದ್ದಿದೆ. ಭವನದ ದುರಸ್ತಿಗಾಗಿ ಎರಡು ಬಾರಿ ಟೆಂಡರ್ ಕರೆದರೂ ಯಾರೂ ಭಾಗಿಯಾಗಿರಲಿಲ್ಲ. ಹಾಗಾಗಿ ವಿಳಂಬವಾಗಿದೆ ಎಂದರು.
ಇದೀಗ ಮೂರನೇ ಬಾರಿ ಕರೆದ ಟೆಂಡರ್ ನಲ್ಲಿ ಗುತ್ತಿಗೆದಾರರು ಭಾಗಿಯಾಗಿದ್ದು, ಬಿಡ್ ಓಪನ್ ಆಗಿದೆ. ಶೀಘ್ರ ಅವರಿಗೆ ಕಾರ್ಯಾದೇಶ ನೀಡಲಾಗುತ್ತಿದೆ. ಭವನ ದುರಸ್ತಿಗೆ ಮೇಯರ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ 92 ಲಕ್ಷ ರೂ. ಹೊಂದಿಸಿ ಕೊಡುತ್ತಿದೆ. ರಾಜ್ಯ ಸರ್ಕಾರ ನೀಡಿರುವ ಶಾಸಕರ ನಿಧಿಯಲ್ಲಿ ನಾನು ಸಹ ಒಂದು ಕೋಟಿ ರೂ. ಕೊಡುವೆ. ಎರಡೂ ಸೇರಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ನಡೆಯಲಿದೆ ಎಂದರು.
ಭವನ ನಿರ್ವಹಣೆ ಇಲ್ಲದ್ದಕ್ಕೆ ಹಾಳಾಗಿದೆ. ಕಳಪೆ ಕಾಮಗಾರಿ ಸಲುವಾಗಿ ಆಗಿಲ್ಲ. ಮುಂದಿನ ದಿನಗಳಲ್ಲಿ ಸರಿಯಾದ ನಿರ್ವಹಣೆ ಮಾಡುವ ಮೂಲಕ ಆಸ್ತಿಗಳನ್ನು ಉಳಿಸಿಕೊಳ್ಳಬೇಕು ಎಂದು ಶಾಸಕರು ಹೇಳಿದರು.