

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಸಂಗೀತ ಉಳಿಸಿ ಬೆಳಸಬೇಕಾದ ಅವಶ್ಯಕತೆ ಇದೆ ಎಂದು ಗಾಯಕ ಪಂ. ಬಾಲಚಂದ್ರ ನಾಕೋಡ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವವಿದ್ಯಾಲಯವು ಪದ್ಮಭೂಷಣ ಡಾ.ಮಲ್ಲಿಕಾರ್ಜುನ ಮನ್ಸೂರ ಸ್ಮರಣಾರ್ಥ, ಕರ್ನಾಟಕ ಲಲಿತಕಲಾ ಕಲಾ ಮತ್ತು ಸಂಗೀತ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂಗೀತಜ್ಞರ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಗೀತದ ದಿಗ್ಗಜರನ್ನು ಬೆಳಸಿದ ಕೀರ್ತಿ ಧಾರವಾಡಕ್ಕೆ ಸಲ್ಲುತ್ತದೆ. ಸಂಗೀತ ಒಂದು ಭಾಷೆಯಾಗಿದ್ದು, ಸಂಗೀತವನ್ನು ಕಲಿಯಲು ಅಧ್ಯಯನ ಮಾಡಲು ಇಂದಿನ ಯುವಕರು ಮುಂದೆ ಬರಬೇಕು. ಭಾರತೀಯ ಸಂಗೀತ ಸಂಸ್ಕೃತಿ ಉಳಿಸುವಲ್ಲಿ ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ಕವಿವಿ ಮೂಲತತ್ವ ಉಪನ್ಯಾಸಗಳ ಸಂಯೋಜಕ ಡಾ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಕವಿವಿ ಮೂಲತತ್ವ ಉಪನ್ಯಾಸ, ಪ್ರಚಾರ ಉಪನ್ಯಾಸ ಆಯೋಜಿಸುತ್ತಿದೆ. ಇಂತಹ ಉಪನ್ಯಾಸಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ಕವಿವಿ ಪ್ರಸಾರಾಂಗ ನಿರ್ದೇಶಕ ಡಾ.ಚಂದ್ರಶೇಖರ ರೊಟ್ಟಿಗವಾಡ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಧಾರವಾಡವನ್ನು ಗುರುತಿಸುವಂತೆ ಮಾಡಿದ ಕೀರ್ತಿ ಡಾ.ಮಲ್ಲಿಕಾರ್ಜುನ ಮನ್ಸೂರ ಅವರಿಗೆ ಸಲ್ಲುತ್ತದೆ. ಧಾರವಾಡ ಸಂಗೀತಗಾರರ ತವರೂರು. ಪಂ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಸೇರಿ ಅನೇಕ ಸಂಗೀತ ದಿಗ್ಗಜರು ಧಾರವಾಡದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಸಚಿವ ಡಾ. ಎ. ಚನ್ನಪ್ಪ ಮಾತನಾಡಿ, ಮಹಾನ್ ಸಂಗೀತ ದಿಗ್ಗಜರಂತೆ ವಿದ್ಯಾರ್ಥಿಗಳು ಸಂಗೀತದಲ್ಲಿ ಸಾಧನೆ ಮಾಡಬೇಕು. ಸಂಗೀತ ಕಲಿಯಲು ಶ್ರದ್ಧೆ, ಶ್ರಮದ ಮೂಲಕ ಸಾಧನೆ ಮಾಡಲು ಯಶಸ್ವಿಯಾಗಿ ಬೆಳೆಯಲು ಸಾಧ್ಯ ಎಂದರು.
ಕವಿವಿ ಸಂಗೀತ ವಿಭಾಗದ ಮುಖ್ಯಸ್ಥ ಮೃತ್ಯುಂಜಯ ಅಗಡಿ, ಕವಿವಿ ಪ್ರಸಾರಾಂಗ ಉಪನಿರ್ದೇಶಕ ಡಾ. ಸಿದ್ದಪ್ಪ ಎನ್., ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.