

ಮ೦ಜುನಾಥ ಎಸ್. ಅಂಗಡಿ ಧಾರವಾಡ
ರೈತರ ಜೀವನಾಡಿಯಾಗಿರುವ ಎತ್ತು, ಎಮ್ಮೆ, ಹಸುಗಳು ಇದ್ದಲ್ಲೇ ಹೋಗಿ ಚಿಕಿತ್ಸೆ ನೀಡುವ ಪಶು ಸಂಜೀವಿನಿ' ಯೋಜನೆ ರಾಜ್ಯಾದ್ಯಂತ ಅನುಷ್ಠಾನಗೊಂಡಿದೆ. ಮೊಬೈಲ್ ವೆಟರ್ನರಿ ಕ್ಲಿನಿಕ್ (ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ) ಸಮೇತ ವೈದ್ಯರ ತಂಡ ರೈತರ ಮನೆ ಬಾಗಿಲಿಗೇ ಹೋಗಿ ಚಿಕಿತ್ಸೆ ನೀಡುತ್ತಿದೆ.
ಕೇಂದ್ರ ಪುರಸ್ಕೃತ ಈ ಯೋಜನೆಯಡಿ ಜಾನುವಾರುಗಳ ಚಿಕಿತ್ಸೆಯಲ್ಲಿ ಧಾರವಾಡ ತಾಲೂಕು ಅಗ್ರಸ್ಥಾನದಲ್ಲಿದೆ. ಜಾನುವಾರುಗಳ ಆರೋಗ್ಯದಲ್ಲಿ ಏರುಪೇರಾದರೆ ಮೊದಲು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಪಾಲಿಕ್ಲಿನಿಕ್‌ಗಳಿಗೆ ಹೋಗಬೇಕಿತ್ತು. ವೈದ್ಯರ ಕೊರತೆ ನೀಗಿಸುವುದು ಮತ್ತು ರೈತರ ಬವಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದಪಶು ಸಂಜೀವಿನಿ' ಯೋಜನೆ ಜಾರಿಯಲ್ಲಿದೆ. ತಾಲೂಕಿಗೊಂದರAತೆ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳನ್ನು ನೀಡಲಾಗಿದ್ದು, ವೈದ್ಯರ ತಂಡ ರೈತರಿದ್ದಲ್ಲಿ ಹೋಗಿ ಉಚಿತ ಚಿಕಿತ್ಸೆ ಮತ್ತು ಔಷಧೋಪಚಾರ ನೀಡುತ್ತಿದೆ.
ಕೇಂದ್ರ ಸರ್ಕಾರ ಪುರಸ್ಕೃತ ಪಶು ಸಂಜೀವಿನಿ ಯೋಜನೆಯಡಿ ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಸಹಾಯವಾಣಿಗೆ ಬಂದ ಕರೆಗಳನ್ನು ಆಧರಿಸಿ ವೈದ್ಯರ ತಂಡ ರೈತರ ಮನೆ ಬಾಗಿಲಿಗೇ ಹೋಗಿ ಚಿಕಿತ್ಸೆ ನೀಡುತ್ತಿದೆ. ರಾಜ್ಯಾದ್ಯಂತ ಧಾರವಾಡ ತಾಲೂಕು ಪ್ರಥಮ ಸ್ಥಾನದಲ್ಲಿದ್ದು, ಉಳಿದ ತಾಲೂಕುಗಳ ತಂಡಗಳಿಗೂ ಸಮರ್ಪಕ ಸೇವೆ ನೀಡುವಂತೆ ಸೂಚಿಸಲಾಗಿದೆ. ಜಿಲ್ಲೆಯಾದ್ಯಂತ ಪಶು ಸಂಜೀವಿನಿಯ ೧೯೬೨ ಸಹಾಯವಾಣಿಯ ಬಗ್ಗೆ ನಿರಂತರ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ.- ಡಾ. ರವಿ ಸಾಲಿಗೌಡರ, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ