

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಡಾ. ಮಲ್ಲಿಕಾರ್ಜುನ ಮನಸೂರ ಜನ್ಮದಿನಾಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಸಂಗೀತೋತ್ಸವ ಸಮಾರಂಭವು ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ಭಾನುವಾರ ಜರುಗಿತು.
ಮುಂಬೈನ ಸಂಗೀತಗಾರ ಪಂ. ವಿದ್ಯಾಧರ ವ್ಯಾಸ್ ಅವರಿಗೆ 2023ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಮತ್ತು ಧಾರವಾಡದ ತಬಲಾ ವಾದಕ ಪಂ. ಡಾ. ರವಿಕಿರಣ ನಾಕೋಡ ಹಾಗೂ ಗದಗನ ಸಂಗೀತಗಾರ ಪಂ. ವೆಂಕಟೇಶ ಆಲಕೋಡ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಪ್ರಶಸ್ತಿಯ 1 ಲಕ್ಷ ರೂ. ನಗದು, ಸ್ಮರಣಿಕೆ ಹಾಗೂ ಯುವ ಪ್ರಶಸ್ತಿ ತಲಾ 25 ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಉನ್ನತ ಶಿಕ್ಷಣ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಸ್.ಎಂ. ಶಿವಪ್ರಸಾದ, ಧಾರವಾಡ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಇಲ್ಲಿನ ಸಂಸ್ಕೃತಿ ಹಾಗೂ ಸಂಗೀತ ನಾಡಿಗೆ ಮಾದರಿ. ಸಂಗೀತ ಕ್ಷೇತ್ರದಲ್ಲಿ ಮನಸೂರ ವಿಶಿಷ್ಟ ಹಾಗೂ ಉತ್ಕೃಷ್ಟ ಸಾಧನೆ ಮಾಡಿದ್ದಾರೆ. ಹೀಗಾಗಿ ಅವರ ಕುರಿತು ಅಧ್ಯಯನ ಮಾಡಬೇಕು. ಸಂಗೀತಕ್ಕೆ ವಿಶ್ವದಲ್ಲಿ ವಿಶೇಷ ಸ್ಥಾನವಿದೆ. ಸಂಗೀತ ಆಲಿಸುವುದರಿಂದ ಮನಸ್ಸು ಶುದ್ಧವಾಗಿ ಒಳ್ಳೆ ವಿಚಾರ ಮೂಡುತ್ತದೆ. ಹೀಗಾಗಿ ಸಂಗೀತ ಕೇಳುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಪ್ರಶಸ್ತಿ ಪುರಸ್ಕೃತ ಮುಂಬೈನ ಪಂ. ವಿದ್ಯಾಧರ ವ್ಯಾಸ್ ಮಾತನಾಡಿ, ಪಂ. ಮಲ್ಲಿಕಾರ್ಜುನ ಮನಸೂರ ಪ್ರಶಸ್ತಿ ಸ್ವೀಕರಿಸಿದ್ದು ಖಷಿ ತಂದಿದೆ. ನಮ್ಮ ತಂದೆಯ ಕಾಲದಿಂದಲೂ ಅವರ ಸಂಗೀತ ಕೇಳಿದ್ದೇನೆ ಎಂದರು.
ಸಮಾರಂಭದ ಬಳಿಕ ಪ್ರಶಸ್ತಿ ಪುರಸ್ಕೃತರು ಗಾಯನ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪಂ. ಎಂ. ವೆಂಕಟೇಶಕುಮಾರ, ಶಂಕರ ಕುಂಬಿ, ದೀಲಿಪ ದೇಶಪಾಂಡೆ, ಅಕ್ಕಮಹಾದೇವಿ ಆಲೂರು, ಇತರರು ಇದ್ದರು.