ಸಂತೋಷ ಲಾಡ್‌ಗೆ ಧಾರವಾಡ ಉಸ್ತುವಾರಿ

web 2
Published on

ಧಾರವಾಡ: ಬಳ್ಳಾರಿಯಿಂದ ಕಲಘಟಗಿಗೆ ಬಂದು ರಾಜಕೀಯ ನೆಲೆ ಕಂಡುಕೊಂಡ ಸಂತೋಷ ಲಾಡ್ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಚಿವರಾಗಿ ಕಾರ್ಮಿಕ ಖಾತೆಯನ್ನು ಪಡೆದುಕೊಂಡಿರುವ ಲಾಡ್, ನಿರೀಕ್ಷೆಯಂತೆ ಧಾರವಾಡದ ಉಸ್ತುವಾಗಿಯಾಗಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರಿನ ಸಂತೋಷ ಲಾಡ್ ತಂದೆ ಶಿವಾಜಿ, ತಾಯಿ ಶೈಲಜಾ. ಸಂಡೂರಿನಲ್ಲಿ ಬಿ.ಕಾಂ ಪದವೀಧರರಾದ ಲಾಡ್ ಆರಂಭದಲ್ಲಿ ಕುಟುಂಬದ ಗಣಿ ಉದ್ಯಮ ನಡೆಸುತ್ತಿದ್ದರು. ನಂತರ ಬಳ್ಳಾರಿಯ ರಾಜಕೀಯ ಸೆಳೆತ ಇವರನ್ನು ಬಿಡಲಿಲ್ಲ. 2002ರಲ್ಲಿ ಸಂಡೂರು ಪಟ್ಟಣ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು. ಅದಾದ ಎರಡೇ ವರ್ಷಗಳಲ್ಲಿ ಅಂದರೆ 2004ರಲ್ಲಿ ಸಂಡೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು.
2008ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಲಾಡ್ ನೆಲೆ ಕಂಡುಕೊಂಡಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರವನ್ನು. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅಭೂತಪೂರ್ವ ಜಯ ಸಾಧಿಸಿ 2ನೇ ಬಾರಿ ಶಾಸಕರಾದರು. ಇವರ ಕಾರ್ಯವೈಖರಿಯನ್ನು ಗುರುತಿಸಿದ ಕಾಂಗ್ರೆಸ್ ಹೈಕಮಾಂಡ್, ಕೆಪಿಸಿಸಿ ಕಾರ್ಯದರ್ಶಿಯನ್ನಾಗಿ ನೇಮಿಸಿತು.
2013ರ ವಿಧಾನಸಭೆ ಚುನಾವಣೆಯಲ್ಲಿ ಕಲಘಟಗಿಯಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಜಯ ಗಳಿಸಿದರು. ಆರಂಭದಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಸ್ಥಾನ ನಿರ್ವಹಿಸಿದರು. ಈ ವೇಳೆ ಧಾರವಾಡ ಜಿಲ್ಲಾ ಉಸ್ತುವಾಗಿಯೂ ಆಗಿದ್ದರು. 2016ರಲ್ಲಿ ಕಾರ್ಮಿಕ ಸಚಿವ ಸ್ಥಾನ ನೀಡಲಾಯಿತು. 2018ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲಾಡ್ ಸಚಿವ ಸ್ಥಾನ ತೊರೆಯಬೇಕಾಯಿತು.
2018ರ ಚುನಾವಣೆಯಲ್ಲಿ ಕಲಘಟಗಿಯಿಂದ ಸ್ಪರ್ಧಿಸಿದ್ದ ಲಾಡ್, ಬಿಜೆಪಿಯ ಸಿ.ಎಂ. ನಿಂಬಣ್ಣವರ ವಿರುದ್ಧ ಸೋಲನುಭವಿಸಿದರು.  ಸೋತರೂ ಕೆಪಿಸಿಸಿ ಹುದ್ದೆಗಳಿಂದ ದೂರವಿರಲಿಲ್ಲ. 2022ರಲ್ಲಿ ಕೆಪಿಸಿಸಿ ಉಪಾಧ್ಯಕ್ಷ, 2023ರ ಚುನಾವಣೆಗೂ ಮೊದಲು ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿದ್ದರು. 2023ರಲ್ಲಿ ಬಿಜೆಪಿಯ ನಾಗರಾಜ ಛಬ್ಬಿ ವಿರುದ್ಧ ಜಯ ಗಳಿಸಿ ಕಾರ್ಮಿಕ ಸಚಿವರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net