

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಜಿಲ್ಲೆಯಲ್ಲಿ ರೈತರ ಜಮೀನಿಗೆ ಸಂಬಂಧಿಸಿದ ಶತಮಾನದಷ್ಟು ಹಳೇ ದಾಖಲೆಗಳು ಡಿಜಿಟಲೀಕರಣಗೊಳ್ಳುತ್ತಿವೆ. ಜಿಲ್ಲೆಯಲ್ಲಿ ಹುಬ್ಬಳ್ಳಿ ನಗರ ತಾಲೂಕನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿತ್ತು. 2024ರ ಫೆಬ್ರವರಿ 10ರಂದು ಡಿಜಿಟಲೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. 2025ರ ಮೇ 30ಕ್ಕೆ ಡಿಜಿಟಲೀಕರಣ ಶೇ. 100 ರಷ್ಟು ಪೂರ್ಣಗೊಂಡಿದೆ. ಹುಬ್ಬಳ್ಳಿ ನಗರ ತಾಲೂಕು ವ್ಯಾಪ್ತಿಯಲ್ಲಿದ್ದ 1.37 ಲಕ್ಷ ಫೈಲ್ಗಳು, 35.48 ಲಕ್ಷ ಭೌತಿಕ ಪುಟಗಳನ್ನು ಸ್ಕ್ಯಾನ್ ಮಾಡಿ, ಅವುಗಳ ನಕಲುಗಳನ್ನು ಪಿಡಿಎಫ್ ಸ್ವರೂಪದಲ್ಲಿ () ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿದೆ. ಈಗ ನಗರ ತಾಲೂಕಿನ ರೈತರಿಗೆ ಡಿಜಿಟಲ್ ಉತಾರ ನೀಡಲಾಗುತ್ತದೆ. ಸದ್ಯ ಈ ವೆಬ್ಸೈಟ್ ಮೂಲಕ ಸಾರ್ವಜನಿಕರು ತಮ್ಮ ಜಮೀನಿನ ದಾಖಲೆಗಳನ್ನು ವೀಕ್ಷಿಸಬಹುದು. ಮುಂಬರುವ ದಿನಗಳಲ್ಲಿ ಕಂದಾಯ ಇಲಾಖೆ ಅಥವಾ ಸಮೀಪದ ಗ್ರಾಮ ಒನ್ ಕೇಂದ್ರಗಳಲ್ಲಿ ಉತಾರಗಳನ್ನು ಪಡೆ ಯಬಹುದಾಗಿದೆ ಎನ್ನುತ್ತಾರೆ ಹುಬ್ಬಳ್ಳಿ ಅಭಿಲೇಖಾಲಯದ ವಿಷಯ ನಿರ್ವಾಹಕ ರಾಜು ಬಮ್ಮನಹಳ್ಳಿ. ಒಂಬತ್ತು ರೂಪಾಯಿ ನಿಗದಿ: ಹುಬ್ಬಳ್ಳಿ ನಗರ ವ್ಯಾಪ್ತಿಯ ಜಮೀನುಗಳ ಡಿಜಿಟಲ್ ಉತಾರಗಳನ್ನು ಪೂರೈಸಲಾಗುತ್ತಿದೆ. 1 ಪುಟಕ್ಕೆ 9 ರೂ. ದರ ನಿಗದಿಪಡಿಸಲಾಗಿದೆ. ನಗರ ವ್ಯಾಪ್ತಿಯಲ್ಲಿವೆ 25 ಗ್ರಾಮ ಹುಬ್ಬಳ್ಳಿ ನಗರ ತಾಲೂಕು ವ್ಯಾಪ್ತಿಯಲ್ಲಿ ಅಮರಗೋಳ, ಅಯೋಧ್ಯಾನಗರ (ಮುನ್ಸಿಪಲ್-ಎಂ), ಅಯೋಧ್ಯಾನಗರದ (ವಿಲೇಜ್-ವಿ), ಬಮ್ಮಾಪುರ, ಬಮ್ಮಾಪುರ (ಎಂ), ಬೀಡನಾಳ, (ಎಂ) ಬೀಡನಾಳ (ವಿ), ಬೆಂಗೇರಿ, ಭೈರಿದೇವರಕೊಪ್ಪ, ಎಂ. ಅರಳಿಕಟ್ಟಿ, ಮರಿಯಾನ ತಿಮ್ಮಸಾಗರ, ಗಬ್ಬೂರ, ಗಾಮನಗಟ್ಟಿ, ಗೋಕುಲ, ಗೋಪನಕೊಪ್ಪ, ಕೇಶ್ವಾಪುರ, ನಾಗಶೆಟ್ಟಿಕೊಪ್ಪ, ಶಹರ ವೀರಾಪುರ, ಸುತಗಟ್ಟಿ, ತಾರಿಹಾಳ, ಉಣಕಲ್ಲ, ಯಲ್ಲಾಪುರ (ಎಂ), ಯಲ್ಲಾಪುರ (ವಿ), ಕೃಷ್ಣಾಪುರ, ಕೃಷ್ಣಾಪುರ (ಎಂ) ಗ್ರಾಮಗಳು ನಗರ ವ್ಯಾಪ್ತಿಯಲ್ಲಿವೆ. ಪ್ರಗತಿಯಲ್ಲಿ ಗ್ರಾಮೀಣ ಗಣಕೀಕರಣ ಹುಬ್ಬಳ್ಳಿ ಗ್ರಾಮೀಣ ತಾಲೂಕು ವ್ಯಾಪ್ತಿಯಲ್ಲಿ ಶಿರಗುಪ್ಪಿ ಹೋಬಳಿಯಲ್ಲಿ 14 ಗ್ರಾಮಗಳು, ಛಬ್ಬಿ ಹೋಬಳಿಯಲ್ಲಿ 32 ಗ್ರಾಮಗಳು ಸೇರಿ ಒಟ್ಟು 46 ಗ್ರಾಮಗಳಿವೆ. ಗ್ರಾಮೀಣ ತಾಲೂಕಿನ ಜಮೀನಿನ ದಾಖಲೆಗಳ ಗಣಕೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ. 1920ರಿಂದ ಈವರೆಗಿನ ದಾಖಲೆಗಳನ್ನು ಗಣಕೀರಣ ಮಾಡಲಾಗುತ್ತಿದೆ. 100 ವರ್ಷಗಳಷ್ಟು ಹಳೆಯ ದಾಖಲೆಗಳಾಗಿರುವುದರಿಂದ ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗುತ್ತಿದೆ ಎನ್ನುತ್ತಾರೆ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ.
ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ನಗರ ತಾಲೂಕನ್ನು ಪೈಲಟ್ (ಪ್ರಾಯೋಗಿಕ) ತಾಲೂಕಾಗಿ ತೆಗೆದುಕೊಳ್ಳಲಾಗಿತ್ತು. ಒಂದು ವರ್ಷದಲ್ಲಿ ಎಲ್ಲ ಕಂದಾಯ ಇಲಾಖೆಯ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಜತೆಗೆ ಅಳ್ನಾವರ ತಾಲೂಕಿನ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಮೇ ತಿಂಗಳಲ್ಲಿ ಪೂರ್ಣಗೊಂಡಿದೆ. ಇನ್ಮುಂದೆ ರೈತರು ಜಮೀನಿನ ಉತಾರಗಳನ್ನು ಶೀಘ್ರದಲ್ಲಿ ಪಡೆಯಬಹುದಾಗಿದೆ. | ದಿವ್ಯಪ್ರಭು ಜಿಲ್ಲಾಧಿಕಾರಿ