

ವಿಜಯವಾಣಿ ಸುದ್ದಿಜಾಲ ಧಾರವಾಡ
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬ0ಧಿಸಿ ಜೀವಾವಧಿ ಮತ್ತು 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ 101 ಅಪರಾಧಿಗಳ ಪೈಕಿ 99 ಜನರಿಗೆ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಬುಧವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶಕುಮಾರ ಹಾಗೂ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಮೊದಲ ಆರೋಪಿ ಮಂಜುನಾಥ ಎಂಬಾತ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ.
2014ರ ಆ. 28ರಂದು ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ಮಧ್ಯೆ ಗಲಾಟೆ ನಡೆದಿತ್ತು. ದಲಿತರ ಮೇಲೆ ಹಲ್ಲೆ ನಡೆದು 4 ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2024ರ ಅ. 21ರಂದು 98 ಜನರಿಗೆ ಜೀವಾಽ ಮತ್ತು ಮೂವರಿಗೆ ತಲಾ 5 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಆರೋಪಿಗಳೆಲ್ಲರೂ ಬಳ್ಳಾರಿ ಜೈಲಿನಲ್ಲಿದ್ದರು.
ಕೊಪ್ಪಳ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ ಮೊದಲ ಆರೋಪಿ ಮಂಜುನಾಥ ಹೊರತುಪಡಿಸಿ ಉಳಿದವರು ಧಾರವಾಡ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ಪೀಠದ ಎದುರು ಪ್ರಕರಣ ಬುಧವಾರ ವಿಚಾರಣೆಗೆ ಬಂದಿತ್ತು.
ದಶಕದ ಸುದೀರ್ಘ ವಿಚಾರಣೆಯ ಅವಽಯಲ್ಲಿ ಆರೋಪಿಗಳು ಜಾಮೀನಿನ ಷರತ್ತುಗಳನ್ನು ದುರುಪಯೋಗಪಡಿಸಿಕೊಂಡಿಲ್ಲ. ಘಟನೆ ನಡೆದ ತಕ್ಷಣ ಪೊಲೀಸರು ಸ್ವಯಂಪ್ರೇರಣೆಯಿ0ದ ದೂರು ದಾಖಲಿಸಿಕೊಳ್ಳದೆ ಲೋಪವಾಗಿದೆ. ಸಂಜೆ 4.30ಕ್ಕೆ ಘಟನೆ ನಡೆದಿದ್ದು, ಮಧ್ಯರಾತ್ರಿ 12.15ಕ್ಕೆ ದೂರು ದಾಖಲಾಗಿದೆ. ಘಟನಾ ಸ್ಥಳದಲ್ಲಿ ಮಹಜರು ವೇಳೆ ದೊರೆತ ಕೃತ್ಯಕ್ಕೆ ಬಳಸಿದ ಸಾಮಗ್ರಿಗಳು ಮತ್ತು ದೋಷಾರೋಪ ಪಟ್ಟಿಯಲ್ಲಿ ದಾಖಲಾದ ಆರೋಪಗಳಲ್ಲಿ ವ್ಯತ್ಯಾಸ ಕಂಡುಬ0ದಿದೆ. ಅಲ್ಲದೆ, ಶಿಕ್ಷೆಗೆ ಗುರಿಯಾದವರ ವಿರುದ್ಧ ಪ್ರತ್ಯೇಕವಾಗಿ ನಿರ್ದಿಷ್ಟ ಆರೋಪಗಳನ್ನು ನಮೂದಿಸಿಲ್ಲ. ಕೆಲ ಆರೋಪಿಗಳು ಪರಿಶಿಷ್ಟ ಪಂಗಡದವರಾಗಿರುವುದರಿ0ದ ನ್ಯಾಯಾಲಯವು ಎಸ್‌ಸಿ- ಎಸ್‌ಟಿ ಕಾಯ್ದೆಯಡಿ ಶಿಕ್ಷೆ ವಿಧಿಸಬಾರದು. ಘಟನೆಯ ನಂತರ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಆರೋಪಿಗಳು ಮತ್ತು ಸಂತ್ರಸ್ತರು ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಆದ್ದರಿಂದ ಜಾಮೀನಿಗೆ ಅರ್ಹರಾಗಿದ್ದಾರೆ ಎಂದು ವಕೀಲರು ವಾದ ಮಂಡಿಸಿದರು.
ವಾದ- ಪ್ರತಿವಾದ ಆಲಿಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು, ತಲಾ 1 ಲಕ್ಷ ರೂ. ಮೌಲ್ಯದ ಬಾಂಡ್ ಮತ್ತು ಶ್ಯೂರಿಟಿ ನೀಡಬೇಕು ಆದೇಶಿಸಿ ಜಾಮೀನು ಮಂಜೂರು ಮಾಡಿದರು.
ಆರೋಪಿಗಳ ಪರ ವಕೀಲರಾದ ಸಂತೋಷ ಮಲಗೌಡರ, ಎನ್.ಡಿ. ಗುಂಡೆ, ಈರನಗೌಡ ಕಬ್ಬೂರ, ವಿ.ಎಂ. ಶೀಲವಂತ, ಆನಂದ ಕೊಳ್ಳಿ, ಇತರರು ವಾದ ಮಂಡಿಸಿದರು.