

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವಿಜನ್ ಫೌಂಡೇಶನ್ ಹಾಗೂ ಹೆಗಡೆ ಗ್ರುಪ್ ವತಿಯಿಂದ ಕರ್ನಾಟಕ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಧಾರವಾಡ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಚಿತ್ರಗಿತ ರಚನೆಕಾರ ವಿ. ನಾಗೇಂದ್ರ ಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧಾರವಾಡ ಗತ್ತು ನಮ್ಮನ್ನು ಪದೇ ಪದೇ ಇಲ್ಲಿಗೆ ಕರೆಯುತ್ತಿದೆ. ರಾಜ್ಯಾದ್ಯಂತ ನನಗೆ ಅಭಿಮಾನಿಗಳು ಹಾಗೂ ಸ್ನೇಹಿತರಿದ್ದಾರೆ. ಆದರೆ ಧಾರವಾಡದಲ್ಲಿ ಅಣ್ಣ- ತಮ್ಮಂದಿರು ಹೆಚ್ಚಿದ್ದಾರೆ. ನಾನು ಬೇಂದ್ರೆ ಅಜ್ಜನ ದೊಡ್ಡ ಅಭಿಮಾನಿ. ಇಲ್ಲಿಗೆ ಬಂದಾಗ ನನ್ನ ಸಾಹಿತ್ಯ, ಕಲೆ, ಸಂಗೀತ ಬದುಕಿಗೆ ಚೈತನ್ಯ ತುಂಬಲಿದೆ ಎಂದರು.
ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ, ಕೆಸಿಡಿ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ಎಸಿಪಿ ಪ್ರಶಾಂತ ಸಿದ್ದನಗೌಡರ, ಸಂಘಟಕರಾದ ಸತೀಶ ಹೆಗಡೆ, ಗಿರೀಶ ಹೆಗಡೆ, ಮಹೇಶ ಶೆಟ್ಟಿ, ಡಾ. ರಾಘವೇಂದ್ರ ಅಮೋಘಿಮಠ, ಇತರರು ಇದ್ದರು.
ನಂತರ ಗಾಯಕ ನವೀನ ಸಜ್ಜು ಸೇರಿ ಇತರರು ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿ ಜನರನ್ನು ರಂಜಿಸಿದರು. ಯುವ ಡ್ಯಾನ್ಸ್ ಅಕಾಡೆಮಿ, ಶಿವ ತಾಂಡವ ಡ್ಯಾನ್ಸ್ ತಂಡಗಳು ವಿವಿಧ ಗೀತೆಗಳಿಗೆ ಪ್ರದರ್ಶಿಸಿದ ನೃತ್ಯಕ್ಕೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.