

ಮಂಜುನಾಥ ಎಸ್. ಅಂಗಡಿ ಧಾರವಾಡ
ವರ್ಷಕ್ಕೆ 2 ಬೆಳೆ ಬೆಳೆಯುತ್ತಿದ್ದ ಜಿಲ್ಲೆಯ ರೈತರು ಜಮೀನುಗಳನ್ನು ತೋಟಗಳಾಗಿ ಮಾರ್ಪಡಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಮಾವು ಬೆಳೆ ಹೆಚ್ಚು ಆದಾಯ ತಂದುಕೊಡುತ್ತಿರುವುದು ಇದಕ್ಕೆ ಕಾರಣ. ಈ ಬಾರಿಯೂ ಜಿಲ್ಲೆಯಲ್ಲಿ ಆಪೂಸ್ ಮಾವು ತಳಿ ನಳನಳಿಸುತ್ತಿದೆ. ಈ ವರ್ಷ ಮಾವು ಬೆಳೆಗೆ ಉತ್ತಮ ವಾತಾವರಣವಿದ್ದು, ಉಷ್ಣತೆ ಹೆಚ್ಚಳವಾಗದೆ, ಇಬ್ಬನಿ ಬೀಳದ ವಾತಾವರಣವಿದ್ದರೆ ಬಂಪರ್ ಫಸಲು ರೈತರ ಕೈಗೆಟುಕಲಿದೆ.
ಜಿಲ್ಲೆಯ ಕಲಘಟಗಿ ಮತ್ತು ಧಾರವಾಡ ತಾಲೂಕುಗಳಲ್ಲಿ ಮಾವು ಹೆಚ್ಚಾಗಿ ಬೆಳೆಯಲಾಗಿದೆ. ಉಳಿದಂತೆ ಕುಂದಗೋಳ ಮತ್ತು ಹುಬ್ಬಳ್ಳಿ ತಾಲೂಕುಗಳಲ್ಲೂ ಅಷ್ಟಿಷ್ಟು ಮಾವು ಬೆಳೆ ಕಾಣಬಹುದು. ಜಿಲ್ಲೆಯ ಬಹುತೇಕ ರೈತರು ಆಪೂಸ್ ತಳಿಯನ್ನೇ ಅವಲಂಬಿಸಿದ್ದಾರೆ. ಈ ಭಾಗದ ಮಣ್ಣು ಮತ್ತು ಹವಾಮಾನ ಗುಣಗಳಿಗೆ ಆಪೂಸ್ ತಳಿಯೇ ಸೂಕ್ತವಾಗಿದೆ.
ಜಿಲ್ಲೆಯಲ್ಲಿ ಅಂದಾಜು 8,400 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಕೆಲ ವರ್ಷಗಳಿಂದ ಮಾವು ಬೆಳೆಗಾರರಿಗೆ ಅಕಾಲಿಕ ಮಳೆ ಕಾಡಿತ್ತು. ಮರಗಳು ಹೂವು, ಹೀಚು ಬಿಟ್ಟ ಸಂದರ್ಭದಲ್ಲಿ ಅಕಾಲಿಕ ಮಳೆಯಾದರೆ ಅರ್ಧದಷ್ಟು ಫಸಲು ಬರುವುದಿಲ್ಲ. ಆದರೆ, ಈ ಬಾರಿ ಅಕಾಲಿಕ ಮಳೆಯಾಗಿಲ್ಲ. ಹೀಗಾಗಿ ಶೇ. 95ರಷ್ಟು ಮಾವಿನ ಮರಗಳು ಹೂವು ಬಿಟ್ಟಿವೆ. ಕಳೆದ 4- 5 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾವಿನ ಮರಗಳು ಉತ್ತಮವಾಗಿ ಹೂವು ಬಿಟ್ಟಿವೆ.
ಕೆಲ ದಿನಗಳ ಹಿಂದೆ ಬೆಳಗಿನ ಜಾವ ಇಬ್ಬನಿ ಬಿದ್ದಿರುವುದು ರೈತರನ್ನು ಚಿಂತೆಗೀಡು ಮಾಡಿತ್ತು. ಆದರೆ, ಇಬ್ಬನಿ ಕಾಟ ಮುಂದುವರಿದಿಲ್ಲ. ನೀರು ಬಸಿಯುವಷ್ಟು ಇಬ್ಬನಿ ಬೀಳಬಾರದು. ಜತೆಗೆ ಹಗಲು ಉಷ್ಣತೆಯ ಪ್ರಮಾಣ ಹೆಚ್ಚಾಗಬಾರದು. ಇಂಥ ಹದಭರಿತ ವಾತಾವರಣವಿದ್ದರೆ ಹೆಕ್ಟೇರ್ಗೆ ಅಂದಾಜು 10- 12 ಟನ್ ಮಾವು ಫಸಲು ಬರುತ್ತದೆ. ತೋಟಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಪರಿಣಾಮ ಧಾರವಾಡ ಜಿಲ್ಲೆಯಲ್ಲಿ ಹೆಕ್ಟೇರ್ಗೆ ಅಂದಾಜು 4-5 ಟನ್ ಫಸಲು ಕೈಗೆಟುಕುತ್ತಿದೆ.
ಮಾವಿನ ಫಸಲು ಉತ್ತಮವಾಗಿ ಬರಬೇಕಾದರೆ ತೋಟಗಳ ನಿರ್ವಹಣೆ ಅತಿ ಮುಖ್ಯ ಎನ್ನುತ್ತಾರೆ ತೋಟಗಾರಿಕೆ ತಜ್ಞರು. ಜೂನ್ ಆರಂಭಕ್ಕೂ ಮೊದಲು ಒಣಗಿದ ಮತ್ತು ದೊಡ್ಡ ರೆಂಭೆಗಳನ್ನು ಕತ್ತರಿಸಬೇಕು. ಇದರಿಂದ ಮರಗಳಿಗೆ ಬಿಸಿಲು ತಾಗುತ್ತದೆ. ಮಳೆಗಾಲದಲ್ಲಿ ಕಸ ಬೆಳೆಯದಂತೆ ನೋಡಿಕೊಳ್ಳಬೇಕು. ಮರಗಳ ಸುತ್ತ ಸ್ವಚ್ಛವಾಗಿಟ್ಟು ನೀರು ಇಂಗುವಂತೆ ವೃತ್ತಾಕಾರದ ಗುಂಡಿಗಳನ್ನು ಮಾಡಬೇಕು. ಮಳೆಗಾಲ ಕಡಿಮೆಯಾಗಿ ಚಳಿ ಆರಂಭವಾಗುತ್ತಿದ್ದಂತೆ ಗೊಬ್ಬರ ಹರಡುವುದು ಮತ್ತು ಕೀಟನಾಶಕ ಸಿಂಪಡಿಸಬೇಕು. ಆದರೆ, ಬಹುತೇಕ ರೈತರು ಮಾವಿನ ತೋಟಗಳನ್ನು ಸ್ವತಃ ನಿರ್ವಹಣೆ ಮಾಡದೆ, 2- 3 ವರ್ಷಗಳ ಒಪ್ಪಂದದಂತೆ ವ್ಯಾಪಾರಸ್ಥರಿಗೆ ಗುತ್ತಿಗೆ ನೀಡಿರುತ್ತಾರೆ. ಇದರಿಂದ ನಿರ್ವಹಣೆ ಇಲ್ಲದೆ ಮಾವಿನ ಫಸಲು ನಿರೀಕ್ಷಿತ ಪ್ರಮಾಣದಲ್ಲಿ ಕೈಗೆಟುಕುತ್ತಿಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕಾಶಿನಾಥ ಭದ್ರನ್ನವರ.
ಮಾವು ಬೆಳೆಗೆ ಈವರೆಗೆ ಇಬ್ಬನಿ ಕಾಟ ಕಂಡುಬಂದಿಲ್ಲ. ಅಕಾಲಿಕ ಮಳೆಯೂ ಆಗಿಲ್ಲ. ಮಾವು ಮರಗಳು ಉತ್ತಮವಾಗಿ ಹೂವು ಬಿಟ್ಟಿದ್ದು, ಉತ್ತಮ ಫಸಲು ನಿರೀಕ್ಷಿಸಲಾಗಿದೆ. ತೋಟಗಳನ್ನು ಉತ್ತಮವಾಗಿ ನಿರ್ವಹಿಸುವ ರೈತರಿಗೆ ಉತ್ತಮ ಫಸಲು ಖಚಿತ. ಕಾಶಿನಾಥ ಭದ್ರನ್ನವರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ