ಸಂಶೋಧನೆಯಲ್ಲಿ ಧಾರವಾಡ ಕೃಷಿ ವಿವಿ ಮೈಲುಗಲ್ಲು; ಬರಗು, ಸಂಕರಣ ಜೋಳದಲ್ಲಿ ಪೋಷಕಾಂಶಗಳ ‘ಸಿರಿ’

Karnataka univarcity Crop webp
Published on

ಮಂಜುನಾಥ ಎಸ್. ಅಂಗಡಿ ಧಾರವಾಡ

ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಬೋಧನೆ, ಸಂಶೋಧನೆ, ವಿಸ್ತರಣೆಯಲ್ಲಿ ಒಂದು ಹೆಜ್ಜೆ ಮುಂದೆ ಇದೆ. ಈ ಮೂರು ಕ್ಷೇತ್ರಗಳಲ್ಲಿ ದೇಶದ ಕೃಷಿ ವಿಶ್ವವಿದ್ಯಾಲಯಗಳ ಪೈಕಿ ಉನ್ನತ ದರ್ಜೆಯಲ್ಲಿರುವ ಕೃಷಿ ವಿವಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಬಿಡುಗಡೆ ಮಾಡಿದ 109 ನೂತನ ತಳಿಗಳಲ್ಲಿ ವಿಶ್ವವಿದ್ಯಾಲಯದ 2 ತಳಿಗಳೂ ಸೇರ್ಪಡೆಯಾಗಿರುವುದು ಧಾರವಾಡದ ಹೆಮ್ಮೆ.

ಇತ್ತೀಚೆಗೆ ಜನರಲ್ಲಿ ಆರೋಗ್ಯಕ್ಕೆ ಬೇಕಾಗುವ ಪೋಷಕಾಂಶಗಳ ಕಾಳಜಿ ಹೆಚ್ಚುತ್ತಿದೆ. ಪೋಷಕಾಂಶಗಳ ಖನಿಜವಾಗಿರುವ ಸಿರಿಧಾನ್ಯಗಳ ಬಳಕೆಗೆ ಪ್ರಾಧಾನ್ಯತೆ ಸಿಕ್ಕಿದೆ. ಅಂತಾರಾಷ್ಟ್ರೀಯ ಆಹಾರ ಮತ್ತು ಕೃಷಿ ಸಂಸ್ಥೆಯು (ಎಫ್​ಎಒ) 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಆಚರಿಸಿದೆ. ಇದರಿಂದ ಸಿರಿಧಾನ್ಯಗಳ ಕಾಳು, ಅಕ್ಕಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಬಂದಿದೆ. ಪೋಷಕಾಂಶಗಳ ಕಾಳಜಿ ಹೆಚ್ಚಾಗಿ ಪ್ರಾಚೀನ ಆಹಾರ ಪದ್ಧತಿಯ ಮೊರೆ ಹೋಗುವ ಅನಿವಾರ್ಯತೆಯಲ್ಲಿರುವ ಜನತೆಗೆ ಸಿರಿಧಾನ್ಯಗಳು ವರದಾನವಾಗಿವೆ. ಹೀಗಾಗಿ, ಸರ್ಕಾರಗಳು ಸಿರಿಧಾನ್ಯ ಬೆಳೆಯಲು ರೈತರನ್ನು ಪ್ರೋತ್ಸಾಹಿಸುತ್ತಿವೆ. ಇದಕ್ಕೆ ಕೈ ಜೋಡಿಸಿರುವ ಕೃಷಿ ವಿಶ್ವವಿದ್ಯಾಲಯ, ಮುಂಗಾರು ಹಂಗಾಮಿನಲ್ಲಿ ಬೆಳೆಯಬಹುದಾದ 2 ಸಿರಿಧಾನ್ಯ ತಳಿಗಳನ್ನು ಸಂಶೋಧನೆ ಮಾಡಿದೆ.

ದೇಶಾದ್ಯಂತ ಅಭಿವೃದ್ಧಿಪಡಿಸಿದ ವಿವಿಧ ಬೆಳೆಗಳ 109 ತಳಿಗಳು ಲೋಕಾರ್ಪಣೆಗೊಂಡಿವೆ. ಅವುಗಳಲ್ಲಿ ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿದ ಮುಂಗಾರು ಸಂಕರಣ ಜೋಳದ ತಳಿ ಡಿಎಸ್​ಎಚ್ 6 (ಸಿಎಸ್​ಎಚ್- 49/ ಎಸ್​ಪಿಎಚ್- 1943) ಹಾಗೂ ಬರಗು ತಳಿ ಡಿಎಚ್​ಪಿಎಂ 60- 4 (ಸಿಪಿಆರ್​ಎಂವಿ- 1/ ಪಿಎಂವಿ- 466) ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ. ಈ ಎರಡೂ ತಳಿಗಳನ್ನು ಅಭಿವೃದ್ಧಿಪಡಿಸಿದ ನಂತರ ರಾಷ್ಟ್ರಮಟ್ಟದಲ್ಲಿ 5 ವರ್ಷ ಸತತ ಪ್ರಯೋಗಗಳ ಫಲಿತಾಂಶ ಕೂಲಂಕಶವಾಗಿ ವಿಶ್ಲೇಷಿಸಲಾಗಿತ್ತು. ವಿವಿಧ ಸಭೆಗಳಲ್ಲಿ ರ್ಚಚಿಸಿ ರಾಷ್ಟ್ರಮಟ್ಟದ ತಳಿ ಬಿಡುಗಡೆ ಸಮಿತಿಗೆ (ಸಿವಿಆರ್​ಸಿ) ಸಲ್ಲಿಸಲಾಗಿತ್ತು. 92ನೇ ಕೇಂದ್ರೀಯ ತಳಿ ಬಿಡುಗಡೆ ಸಮಿತಿಯಲ್ಲಿ ಬಿಡುಗಡೆಯಾಗಿವೆ.

ಸಂಕರಣ ಜೋಳದ ತಳಿಯ ವಿಶೇಷತೆ

ಈ ತಳಿಯನ್ನು ಕರ್ನಾಟಕ, ತಮಿಳುನಾಡು, ರಾಜಸ್ಥಾನ, ತೆಲಂಗಾಣ ಹಾಗೂ ಗುಜರಾತ್ ರಾಜ್ಯಗಳ ಮುಂಗಾರು ಜೋಳ ಬೆಳೆಯುವ ಪ್ರದೇಶಕ್ಕೆ ಶಿಫಾರಸು ಮಾಡಲಾಗಿದೆ. ಇದು ಪ್ರತಿ ಹೆಕ್ಟೇರ್​ಗೆ ಸರಾಸರಿ 38ರಿಂದ 42 ಕ್ವಿಂಟಾಲ್ ಕಾಳು ಹಾಗೂ 110ರಿಂದ 120 ಕ್ವಿಂಟಾಲ್ ಮೇವಿನ ಇಳುವರಿ ಕೊಡುತ್ತದೆ. ಮೊದಲಿದ್ದ ಸಂಕರಣ ತಳಿ ಸಿಎಸ್​ಎಚ್- 30ಕ್ಕಿಂತ ಶೇ. 13.5ರಷ್ಟು ಹೆಚ್ಚು ಕಾಳು ಹಾಗೂ ಶೇ. 7.4ರಷ್ಟು ಹೆಚ್ಚು ಮೇವಿನ ಇಳುವರಿ ನೀಡುತ್ತದೆ. ಇದು ಅಲ್ಪಾವಧಿ ತಳಿಯಾಗಿದ್ದು, ಕಾಳು ಕಪ್ಪಾಗುವ ರೋಗವನ್ನು ತಡೆದುಕೊಳ್ಳುತ್ತದೆ.

ಬರಗು ತಳಿಯ ವಿಶೇಷತೆ

ಈ ತಳಿಯನ್ನು ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಮಳೆಯಾಶ್ರಿತ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ. ಪ್ರತಿ ಹೆಕ್ಟೇರ್​ಗೆ 24ರಿಂದ 26 ಕ್ವಿಂಟಾಲ್ ಕಾಳು ಹಾಗೂ 43ರಿಂದ 45 ಕ್ವಿಂಟಾಲ್ ಮೇವಿನ ಇಳುವರಿ ನೀಡುತ್ತದೆ. ಮೊದಲಿದ್ದ ಟಿಎನ್​ಎಯು-164ಕ್ಕಿಂತ ಶೇ. 20.8ರಷ್ಟು ಕಾಳು ಮತ್ತು ಶೇ. 3.7ರಷ್ಟು ಅಧಿಕ ಮೇವಿನ ಇಳುವರಿ ನೀಡುತ್ತದೆ. ಈ ತಳಿಯು ಸುಳಿ ಬಾಧೆಯನ್ನು ತಡೆದುಕೊಳ್ಳುತ್ತದೆ.

ಇಂದು ಸಿರಿಧಾನ್ಯಗಳ ಉತ್ಪಾದನೆಯನ್ನು ವೃದ್ಧಿಸುವ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ಕೃಷಿ ವಿಶ್ವವಿದ್ಯಾಲಯವು ಎಲ್ಲ ಸಿರಿಧಾನ್ಯಗಳ ತಳಿ ಅಭಿವೃದ್ಧಿ ಹಾಗೂ ತಾಂತ್ರಿಕತೆಗಳ ಸಂಶೋಧನೆ ನಡೆಸುತ್ತಿದೆ. ರಾಷ್ಟ್ರಮಟ್ಟದಲ್ಲಿ ಬಿಡುಗಡೆಯಾದ ಕೃಷಿ ವಿಶ್ವವಿದ್ಯಾಲಯಗಳ 109 ನೂತನ ತಳಿಗಳಲ್ಲಿ ಧಾರವಾಡ ವಿಶ್ವವಿದ್ಯಾಲಯದ ಸಂಕರಣ ಜೋಳ ಮತ್ತು ಬರಗು ತಳಿಗಳು ಇವೆ. ಇವು ಸಿರಿಧಾನ್ಯಗಳಾಗಿದ್ದು, ಕಾಳು ಮತ್ತು ಮೇವಿನ ಹೆಚ್ಚು ಇಳುವರಿ ನೀಡುತ್ತವೆ. - ಎನ್.ಜಿ. ಹನುಮರಟ್ಟಿ, ಕೃಷಿ ವಿವಿ ಜೋಳ ಸಂಶೋಧನೆ ಯೋಜನೆ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net