ಧಾರ್ವಿುಕ ಸಂಪ್ರದಾಯ ಕಡೆಗಣಿಸುವುದು ಸಲ್ಲ

NAVARATRI
Published on

ಹಾನಗಲ್ಲ: ನಮ್ಮ ಜನಸಮುದಾಯದ ಧಾರ್ವಿುಕ ಸಂಪ್ರದಾಯಗಳನ್ನು ಎಂಥದ್ದೇ ಕಠಿಣ ಪರಿಸ್ಥಿತಿಯಲ್ಲೂ ಕಡೆಗಣಿಸಬಾರದು. ಲೌಕಿಕ ಕಾರ್ಯಗಳ ಮಧ್ಯೆ ಸಂಪ್ರದಾಯದ ಹಬ್ಬಗಳು ಸೊರಗಬಾರದು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಫ್ರೆಂಡ್ಸ್ ಅಸೋಸಿಯೇಶನ್ ಸಭಾಭವನದಲ್ಲಿ ನಾಡಹಬ್ಬ ನವರಾತ್ರಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಭುವನೇಶ್ವರಿ ದೇವಿ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅತಿವೃಷ್ಟಿ, ಅನಾವೃಷ್ಟಿಯ ಸಂದರ್ಭದಲ್ಲೂ ಇಲ್ಲಿನ ನಾಡಹಬ್ಬ ನಡೆದುಕೊಂಡು ಬಂದಿದೆ. ಶತಮಾನೋತ್ಸವದ ಅಂಚಿನಲ್ಲಿರುವ ಹಾನಗಲ್ಲ ನಾಡಹಬ್ಬಕ್ಕೆ ರಾಜ್ಯಾದ್ಯಂತ ಹೆಸರಿದೆ. ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ವೇದಿಕೆಯಾಗಿ ನಾಡಿಗೆ ವೈಶಿಷ್ಠ್ಯಪೂರ್ಣ ಕೊಡುಗೆ ನೀಡಿದೆ ಎಂದರು.

ತಹಸೀಲ್ದಾರ್ ರವಿಕುಮಾರ ಕೊರವರ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ವರ್ಷ ಮಳೆ ಕುಸಿತದಿಂದಾಗಿ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ, ಧಾರ್ವಿುಕ ನೆಲೆಗಟ್ಟಿನಲ್ಲಿ ಕಾರ್ಯಕ್ರಮಗಳು ಜರುಗುವಂತಾಗಿದೆ. ಆದಾಗ್ಯೂ ಸಂಪ್ರದಾಯಗಳನ್ನು ಕೈಬಿಡದೇ ಮುಂದುವರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಾಹಿತ್ಯಿಕ ಮನಸ್ಸುಗಳು ಒಂದಾಗಿ ನಮ್ಮ ನೆಲ-ಜಲ, ಸಾಹಿತ್ಯ, ಕನ್ನ ನಾಡು-ನುಡಿಗಳ ರಕ್ಷಣೆಗೆ ಇಂಥ ವೇದಿಕೆಗಳನ್ನು ಜೀವಂತಗೊಳಿಸಬೇಕಾಗಿದೆ ಎಂದರು.

ನಾಡಹಬ್ಬ ಉತ್ಸವ ಸಮಿತಿ ಮಾಜಿ ಅಧ್ಯಕ್ಷರುಗಳಾದ ಕೆ.ಎಲ್. ದೇಶಪಾಂಡೆ, ಉದಯ ನಾಸಿಕ, ಮಾಜಿ ಕಾರ್ಯದರ್ಶಿ ಗಿರೀಶ ದೇಶಪಾಂಡೆ, ಸಂಘಟಕರಾದ ಮಾರುತಿ ಶಿಡ್ಲಾಪುರ, ಕೃಷ್ಣಾ ಪೂಜಾರ, ಪ್ರಶಾಂತ ಮುಚ್ಚಂಡಿ, ಗುರುಸಿದ್ದಪ್ಪ ಕೊಂಡೋಜಿ, ಮಾಲತೇಶ ಕಾಮನಹಳ್ಳಿ, ಡಾ.ಡಿ.ಜಿ. ಕುಲಕರ್ಣಿ, ದತ್ತಾತ್ರೇಯ ದೇಸಾಯಿ, ಪ್ರಶಾಂತ ನಾಡಗೇರ, ಸಂಜು ಬೇದ್ರೆ, ಸುಧಾಬಾಯಿ ಕುಲಕರ್ಣಿ, ಸುರೇಖಾ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net