ಹುದ್ದೆ ಕಾಯಂಗಾಗಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಧರಣಿ

17
Published on

ಮೈಸೂರು: ಹುದ್ದೆ ಕಾಯಂ ಮಾಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದಿಂದ ನಗರದಲ್ಲಿ ಮಂಗಳವಾರ ಧರಣಿ ನಡೆಯಿತು.
ನಗರದ ಹುಣಸೂರು ರಸ್ತೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿದರು.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಂದಾಜು 12 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಇಂದಿಗೂ ಸೇವಾ ಭದ್ರತೆ ಇಲ್ಲದಂತಾಗಿದೆ ಎಂದು ದೂರಿದರು.
ಅಲ್ಲದೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಹಲವರು ಇದೀಗ ನಿವೃತ್ತಿ ಅಂಚಿನಲ್ಲಿದ್ದು, ಸೇವಾ ಭದ್ರತೆ ಇಲ್ಲದಿದ್ದರೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇಂದಿಗೂ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಆದ್ದರಿಂದ ಸರ್ಕಾರ, ಸಂಬಂಧಪಟ್ಟವರು ಈಗಾಲಾದರೂ ಸಮಸ್ಯೆಗಳ ಬಗ್ಗೆ ನಿಗಾ ವಹಿಸುವ ಮೂಲಕ ಅತಿಥಿ ಉಪನ್ಯಾಸಕರ ಸೇವೆಯನ್ನ ಕಾಯಂ ಮಾಡಿಕೊಡಬೇಕೆಂದು ಒತ್ತಾಯಿಸಿ ಜಂಟಿ ನಿರ್ದೇಶಕರ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಜಿ.ವಿ. ರಮೇಶ್, ಸಂಚಾಲಕ ಡಿ.ನಾಗರಾಜ್, ಪ್ರಮುಖರಾದ ಹನುಮಂತೇಶ್, ಆಶಾಲತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net