ದಲಿತರಿಗೆ ನಿವೇಶನ ಹಂಚದಿದ್ದರೆ ಸಿಎಂ ಮನೆ ಎದುರು ಧರಣಿ

IMG_20230605_124304
Published on

ತಿ.ನರಸೀಪುರ: ಬಾಬು ಜಗಜೀವನರಾಮ್ ಸಮುದಾಯ ಭವನದ ಹಿಂಭಾಗವಿರುವ ನಿವೇಶನವನ್ನು ಸರ್ಕಾರ ನ್ಯಾಯಯುತವಾಗಿ ಗೋಪಾಲಪುರ ಬಡಾವಣೆಯ ದಲಿತರಿಗೆ ಹಂಚಿಕೆ ಮಾಡದಿದ್ದರೆ ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನಾ ಧರಣಿಯನ್ನು ಕೂರಬೇಕಾಗುತ್ತದೆ ಎಂದು ಸಮುದಾಯದ ಹಿರಿಯ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಎಚ್ಚರಿಸಿದರು.

ಪಟ್ಟಣದ ಗೋಪಾಲಪುರದಲ್ಲಿ ಹಂಚಿಕೆಯಾಗದಿರುವ ನಿವೇಶನದಲ್ಲಿ ಭಾನುವಾರ ನಿವಾಸಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರು ಶಾಸಕರಾಗಿ ಪ್ರತಿನಿಸುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಗೋಪಾಲಪುರದಲ್ಲಿ ನಿವೇಶನಕ್ಕಾಗಿ ಆರೇಳು ದಶಕಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿರುವ ಮಾದಿಗ ಸಮುದಾಯಕ್ಕೆ ನಿವೇಶನವನ್ನು ಹಂಚಿಕೆ ಮಾಡದಿರುವುದು ಆಡಳಿತ ನಡೆಸಿದ ಸರ್ಕಾರ ಮತ್ತು ಜನಪ್ರತಿನಿಗಳ ಮಹಾ ಪಾಪದ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಗೋಪಾಲಪುರ ಬಡಾವಣೆಯ ನಿವಾಸಿಗಳು ನಾಗರಿಕರಲ್ಲವ? ರಾಜ್ಯದ ಪ್ರಜೆಗಳಲ್ಲವ? ಎಂದು ಪ್ರಶ್ನಿಸಿದರಲ್ಲದೆ, ಅವರಿಗಾಗಿ ಮೀಸಲಿರುವ ನಿವೇಶನವನ್ನು ಪಡೆಯೋಕೆ ಇನ್ನೆಷ್ಟು ವರ್ಷಗಳು ಕಾಯಬೇಕು?. ನಮ್ಮ ತಾಳ್ಮೆಗೂ ಇತಿಮಿತಿ ಇದೆ. ಹಾಗಾಗಿ ಸಿಎಂ ಮನೆಯ ಎದುರಿಗೆ ನಿವೇಶನಕ್ಕಾಗಿ ಧರಣಿ ಕುಳಿತುಕೊಳ್ಳುತ್ತೇವೆ. ಅದಕ್ಕೂ ಸ್ಪಂದಿಸದಿದ್ದರೆ ಬೇಡಿಕೆ ಈಡೇರುವವರೆಗೂ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಿ.ರಮೇಶ್ ಸ್ಪಷ್ಟಪಡಿಸಿದರು.

ಮುಖಂಡರಾದ ಜೈರಾಮ್, ನರಸಿಂಹಮೂರ್ತಿ, ಮಲ್ಲೇಶ್, ರಾಜಪ್ಪ, ನಾಗಣ್ಣ, ಶ್ರೀಧರ್, ರಾಜೀವ್, ಚಿಕ್ಕರಾಜ, ಶ್ರೀನಿವಾಸ್, ಶಿವಮಾದು, ವಿಶ್ವ, ಸಂದೀಪ್, ಮನು, ನಿತಿನ್, ಆನಂದ್, ಧನು, ಮನೋಜ್ ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net