

ಕಡೂರು: ಅತಿಥಿ ಉಪನ್ಯಾಸಕರಿಗಾಗಿ ಮಂಜೂರಾಗಿರುವ ವೇತನವನ್ನು ನೀಡದೆ ಎರಡೂವರೆ ತಿಂಗಳಿಂದ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 35ಕ್ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಬುಧವಾರ ಕಾಲೇಜಿನ ಪ್ರಾಚಾರ್ಯರ ಕೊಠಡಿ ಮುಂದೆ ಧರಣಿ ನಡೆಸಿದರು.
ಶನಿವಾರ ಸಾಂಕೇತಿಕವಾಗಿ ನಡೆಸಿದ್ದ ಪ್ರತಿಭಟನೆಗೆ ಒಂದೆರಡು ದಿನದಲ್ಲಿ ವೇತನ ಮಂಜೂರು ಮಾಡಿಸಿಕೊಡುವುದಾಗಿ ಅತಿಥಿ ಉಪನ್ಯಾಸಕರಿಗೆ ಭರವಸೆ ನೀಡಿದ್ದ ಪ್ರಾಚಾರ್ಯರು ಮಂಗಳವಾರ ಕಳೆದರೂ ವೇತನ ಮಂಜೂರು ಮಾಡಿಕೊಡುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಪ್ರಾಚಾರ್ಯ ಕೆ.ಎ.ರಾಜಣ್ಣ ಅವರಿಗೆ ಅವರ ೇರಾವ್ ಹಾಕಿದರು.
ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ವೇತನ ಮಂಜೂರು ಮಾಡಿಕೊಡುವಲ್ಲಿ ಪ್ರಾಚಾರ್ಯ ವಿಫಲರಾಗಿದ್ದಾರೆ. ಮೂರು ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲ. 23 ದಿನ ಗೈರು ಎಂದು ನಮೂದಿಸಿ ಅಷ್ಟೂ ದಿನದ ವೇತನ ತಡೆಹಿಡಿದಿದ್ದಾರೆ. ಪ್ರತಿದಿನ ಎರಡು ಸಹಿ ಹಾಕಲು ಒತ್ತಾಯಿಸುತ್ತಿದ್ದಾರೆ. ಅದು ನಿಯಮಾವಳಿಯಲ್ಲಿ ಇಲ್ಲ. ವೇತನ ಬಿಡುಗಡೆಗೆ ಸುಮ್ಮನೆ ದಿನ ದೂಡುತ್ತಿದ್ದಾರೆ. ಕಾಲೇಜಿನ ಜಂಟಿ ನಿರ್ದೇಶಕರು ಬರುವವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿದರು.
ಕಾಲೇಜು ಪ್ರಾಚಾರ್ಯ ಡಾ. ರಾಜಪ್ಪ ಮಾತನಾಡಿ, ಎರಡು ತಿಂಗಳ ವೇತನ ಬಿಡುಗಡೆಗೆ ಸಿದ್ಧವಿದೆ. ಉಳಿದ ಸಂಬಳ ಬಿಡುಗಡೆಗೆ ಮೇಲಧಿಕಾರಿಗಳು ನಿರ್ಧರಿಸಬೇಕು. ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ಕೆಲ ಪ್ರಕ್ರಿಯೆ ಪೂರೈಸಿದ ನಂತರ ಬಾಕಿ ವೇತನ ಬಿಡುಗಡೆ ಮಾಡಲಾಗುತ್ತದೆ ಎಂದು ಮನವಿ ಮಾಡಿದರೂ ಅತಿಥಿ ಉಪನ್ಯಾಸಕರು ಒಪ್ಪದೆ ಧರಣಿ ಮುಂದುವರಿಸಿದರು. ಕಾರ್ಯಕ್ರಮವೊಂದಕ್ಕೆ ಅಧ್ಯಕ್ಷತೆ ವಹಿಸಲು ತೆರಳಬೇಕಿದ್ದ ಪ್ರಾಚಾರ್ಯರನ್ನು ಹೋಗಲು ಬಿಡದೆ ಬಾಗಿಲಿಗೆ ಅಡ್ಡ ಕುಳಿತು ಘೋಷಣೆ ಕೂಗಿದರು.
ಶಿವಮೊಗ್ಗದಿಂದ ಉನ್ನತ ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ವಿಷ್ಣುಮೂರ್ತಿ ಆಗಮಿಸಿ ಅತಿಥಿ ಉಪನ್ಯಾಸಕರ ಹಾಜರಾತಿ ಪರಿಶೀಲಿಸಿ ವಿಭಾಗಗಳ ಎಚ್‌ಒಡಿಗಳ ಸಭೆ ನಡೆಸಿದರು. ಕಾಲೇಜಿನಲ್ಲಿ ತರಗತಿಗಳನ್ನು ಅತಿಥಿ ಉಪನ್ಯಾಸಕರು ನಡೆಸಿರುವ ತರಗತಿಗಳ ಪೂರಕ ಹಾಜರಾತಿ ಪುಸ್ತಕಗಳ ದಾಖಲೆಗಳನ್ನು ಪರಿಶೀಲಿಸಿದರು. ಎರಡು ತಿಂಗಳ ಹಾಜರಾತಿ ಹೊರತುಪಡಿಸಿ ಉಳಿದ 23 ದಿನಗಳ ಬಗ್ಗೆ ಸಮಸ್ಯೆ ಬಗೆಹರಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ವೇತನವನ್ನು ಯಾವುದೇ ಕಾರಣಕ್ಕೂ ತಡೆ ಹಿಡಿಯುವುದಿಲ್ಲ. ಮೂರು ದಿನಗಳೊಳಗಾಗಿ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದಾಖಲೆಗಳನ್ನು ಒದಗಿಸಿಕೊಡಲಾಗುತ್ತದೆ. ಲೋಪಗಳನ್ನು ಸರಿಪಡಿಸಿ ಸೂಕ್ತ ದಾಖಲೆಗಳನ್ನು ನೀಡಿದರೆ ಇಲಾಖೆ ನಿರ್ದೇಶಕರಿಗೆ ಕಳುಹಿಸುತ್ತೇನೆ. ನಂತರ ವೇತನ ಬಿಡುಗಡೆಯಾಗುತ್ತದೆ. ಈಗ ಎರಡು ತಿಂಗಳ ವೇತನ ಪಡೆದುಕೊಳ್ಳಿ ಎಂದು ತಿಳಿಸಿದರೂ ಒಪ್ಪದೆ ಧರಣಿ ಮುಂದುವರಿಸಿದರು. ಕೊನೆಗೆ ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ನಿರತರಾದರು.
ಸಹಾಯಕ ಜಂಟಿ ನಿರ್ದೇಶಕ ಎನ್.ಜಗದೀಶ್, ಶಿಕ್ಷಣ ಇಲಾಖೆ ವ್ಯವಸ್ಥಾಪಕ ಮೌನೇಶ್ವರಾಚಾರ್, ಅತಿಥಿ ಉಪನ್ಯಾಸಕರಾದ ಬಸವರಾಜ್, ಶರತ್, ಶ್ರೀಧರ್, ಪೂರ್ಣೇಶ್, ನವೀನ್, ಸುರೇಶ್, ಕವಿತಾ ಇತರರಿದ್ದರು.