

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಎನ್.ಯೋಗೇಶ್ ಆಯೋಜಿಸಿರುವ ‘ಎಂ.ಶ್ರೀನಿವಾಸ್ ಧಾರ್ಮಿಕ ಯಾತ್ರೆ’ಗೆ ಗುರುವಾರ ನಗರದ ಕಾಳಿಕಾಂಬ ದೇವಾಲಯದಲ್ಲಿ ಚಾಲನೆ ದೊರೆಯಿತು.
ಮೊದಲ ಪ್ರವಾಸದಲ್ಲಿ ಮಂಡ್ಯ ನಗರ ಹಾಗೂ ವಿವಿಧ ಹಳ್ಳಿಗಳಿಂದ 700ಕ್ಕೂ ಹೆಚ್ಚು ಜನರು ತೆರಳಿದರು. 10 ಬಸ್ ಹಾಗೂ 10 ಕಾರುಗಳಲ್ಲಿ ಪ್ರಯಾಣಿಸಲಾಯಿತು. ಎಚ್.ಎನ್.ಯೋಗೇಶ್ ಕೂಡ ಜತೆಗೆ ತೆರಳಿದರು.
ಇದಕ್ಕೂ ಮುನ್ನ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಯಾತ್ರೆಗೆ ಚಾಲನೆ ನೀಡಿದ ಶಾಸಕ ಎಂ.ಶ್ರೀನಿವಾಸ್, ಕ್ಷೇತ್ರದ ಜನರಿಗೆ ಧಾರ್ಮಿಕ ಪ್ರವಾಸ ಮಾಡಿಸುವ ನಿಟ್ಟಿನಲ್ಲಿ ಎಚ್.ಎನ್.ಯೋಗೇಶ್ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮ ರೂಪಿಸಿದ್ದಾರೆ. ಪ್ರವಾಸ ಯಶಸ್ವಿಯಾಗಲೆಂದು ಹಾರೈಸುತ್ತೇನೆ ಎಂದರು.
ಎಚ್.ಎನ್.ಯೋಗೇಶ್ ಮಾತನಾಡಿ, ಶಾಸಕರ ಹೆಸರಿನಲ್ಲಿ ಕ್ಷೇತ್ರದ ಜನರಿಗೆ ಧಾರ್ಮಿಕ ಯಾತ್ರೆ ಮಾಡಿಸಬೇಕೆಂದು ಹಿಂದೆಯೇ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಆದರೆ ಕೋವಿಡ್ ಕಾರಣಕ್ಕೆ ಸಾಧ್ಯವಾಗಿರಲಿಲ್ಲ. ಕ್ಷೇತ್ರದ ಜನರು ಶಾಸಕರು ಸೇರಿದಂತೆ ನಮ್ಮ ಕುಟುಂಬದವರಿಗೆ ಅಪಾರ ಪ್ರೀತಿ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಪ್ರವಾಸ ಮಾಡಿಸಲಾಗುತ್ತಿದೆ. ಇದೊಂದು ಸೇವೆಯಷ್ಟೇ. ಕ್ಷೇತ್ರದ ಯಾವುದೇ ಹಳ್ಳಿಯಿಂದ ಎಷ್ಟು ಜನರು ಬಂದರೂ ಕರೆದುಕೊಂಡು ಹೋಗಲಾಗುವುದು ಎಂದರು.
ಮೊದಲ ಪ್ರವಾಸ ಮಂಡ್ಯ ನಗರದಿಂದ ತೆರಳಿ ಬಸರಾಳಿನಲ್ಲಿ ಪೂಜೆ ಸಲ್ಲಿಸಿ ಹಾಸನ ಮೂಲಕ ಧರ್ಮಸ್ಥಳಕ್ಕೆ ತಲುಪಲಾಗುವುದು. ಬಳಿಕ ದರ್ಶನ ಮುಗಿಸಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸಲಾಗಿದೆ. ಎರಡನೇ ದಿನ ಸೌತಡ್ಕ ಗಣಪತಿ ದರ್ಶನ ಮಾಡಿಸಿ ಬಳಿಕ ಕುಕ್ಕೆ ಸುಬ್ರಮಣ್ಯಸ್ವಾಮಿ ದರ್ಶನದ ನಂತರ ವಾಪಸ್ ಬರಲಾಗುವುದು. ಪ್ರವಾಸಕ್ಕೆ ತೆರಳಿರುವ ಎಲ್ಲರಿಗೂ ಊಟ, ವಾಸ್ತವ್ಯ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಶಾಸಕರ ಹೆಸರಿನಲ್ಲಿ ಧಾರ್ಮಿಕ ಪ್ರವಾಸ ಮಾಡಿಸಬೇಕೆನ್ನುವುದಷ್ಟೇ ಇದರ ಉದ್ದೇಶ ಎಂದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ, ಸದಸ್ಯ ನಾಗೇಶ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಗೌರೀಶ್, ಶಂಕರೇಗೌಡ, ರಮೇಶ್, ಪುಟ್ಟಸ್ವಾಮಿ, ಮನೋಜ್ ಇತರರಿದ್ದರು.