

ಮಂಡ್ಯ: ಸ್ವಾರ್ಥ ಬಿಟ್ಟು ದೂರದೃಷ್ಟಿ ಬೆಳೆಸಿಕೊಳ್ಳಬೇಕು. ನನಗೆ ಕೇಡಾದರೂ ಪರವಾಗಿಲ್ಲ, ಊರಿಗೆ ಒಳ್ಳೆಯದಾಗಬೇಕು ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲಿಯೂ ಬರಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ತಾಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ದ್ಯಾಪಸಂದ್ರ ಗ್ರಾಮಾಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪಂಚಮುಖಿ ಗಣಪತಿ ದೇವಸ್ಥಾನ, ಶ್ರೀರಾಮ ಮಂದಿರ ಮತ್ತು ನಾಗದೇವತಾ ಪ್ರತಿಷ್ಠಾಪನೆ, ಕುಂಭಾಭಿಷೇಕ ಹಾಗೂ ಸಾಯಿಸಭಾ ಮಂಟಪ, ಹುಲಿಯೂರಮ್ಮ ದೇವರ ನಿವೇಶನದ ಕಾಂಪೌಂಡ್, ಮಹಾಲಿಂಗೇಶ್ವರ ದೇವಸ್ಥಾನದ ಊಟದ ಕೊಠಡಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇವರಿಗೆ ಮೊದಲು ನಮಸ್ಕಾರ ಮಾಡುವುದು ರೂಢಿಸಿಕೊಳ್ಳಬೇಕು. ರಾಮನ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಸಮಾಜಕ್ಕೆ ಒಳಿತು ಮಾಡಬೇಕು. ಆ ಮೂಲಕ ಒಳಿತೆಂಬ ಕಾಣಿಕೆಯನ್ನು ನೀಡಬೇಕು. ನಮಗೆ ರಾವಣ ರಾಜ್ಯ ಬೇಡ, ರಾಮ ರಾಜ್ಯ ಬೇಕಿದೆ. ರಾಮ ರಾಜ್ಯ ಬೇಕೆಂದರೆ ರಾಮನ ತತ್ವಗಳನು ಹಾಗೂ ಗುಣಗಳನ್ನು ಅಳವಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಶ್ರೀರಾಮನಿಗೆ ಶರಣಾದರೆ ಮಾನವನ ಸಕಲ ಕಷ್ಟವು ಪರಿಹಾರವಾಗುತ್ತದೆ. ಆದ್ದರಿಂದ ಎಲ್ಲರೂ ಶ್ರೀರಾಮನಿಗೆ ಶರಣಾಗುವ ಮೂಲಕ ರಾಮ ರಾಜ್ಯವನ್ನು ಮಾಡಬೇಕಿದೆ ಎಂದು ಸಲಹೆ ನೀಡಿದರು.
ಕೆ.ಆರ್.ನಗರ ಕಾಗಿನೆಲೆ ಮಹಾಸಂಸ್ಥಾನ ಮಠದ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಸುಖವಾಗಿ ಇರಬೇಕು ಎನ್ನುವ ದೃಷ್ಟಿಯಿಂದ ದೇವತಾರಾಧನೆ ಮಾಡುತ್ತಿರುವುದು ಉತ್ತಮ ಕೆಲಸ. ಆದರೆ, ಎಲ್ಲಿದ್ದಾನೆ ದೇವರು ಎಂದು ಕೇಳುವವರೇ ಹೆಚ್ಚು. ದೇವರು ಎಲ್ಲಿದ್ದಾನೆ ಎನ್ನುವುದೇ ಸರಿಯಾಗಿ ತಿಳಿದಿಲ್ಲ. ಗುಡಿ, ಕಾಶಿ, ರಾಮೇಶ್ವರ, ಧರ್ಮಸ್ಥಳದಲ್ಲಿಲ್ಲ. ಅವನು ನಮ್ಮ ದೇಹವೆಂಬ ಗುಡಿಯಲ್ಲಿ ಹಾಗೂ ಎದೆಯಲ್ಲಿದ್ದುಕೊಂಡು ಉಸಿರಾಡಿಸುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಈ ನೆಲದಲ್ಲಿ ಧರ್ಮ ಮತ್ತು ಸಂಸ್ಕಾರಕ್ಕೆ ಬೆಲೆಯಿದೆ. ಧರ್ಮವನ್ನ ಎತ್ತಿ ಹಿಡಿದ ದೇಶ ನಮ್ಮದು. ದೇವರಿಗೆ ಭಕ್ತಿಯಿಂದ ನಮಿಸುತ್ತೇವೆ. ಯಾವುದೇ ಊರಿಗೆ ಹೋದರೂ ರಸ್ತೆ, ಮನೆ ಇಲ್ಲದಿದ್ದರೂ ಸಹ ದೇವಾಲಯ ಕಟ್ಟಬೇಕು ಎಂದಾಗ ಬಹಳ ಭಕ್ತಿಯಿಂದ ತನ್ನ ಕೈಲಾದ ಸಹಾಯ ಮಾಡುವ ಜನರು ಇದ್ದಾರೆ. ಸನ್ಯಾಸಿಗಳು, ಸಾಧಕರು ಹಾಗೂ ದೈವ ಸ್ವರೂಪದವರು ತಿರುಗಾಡಿದ ಸ್ಥಳವೂ ನಮ್ಮ ದೇಶದ ಹೆಮ್ಮೆಯಾಗಿದೆ ಎಂದರು.
ಶಾಸಕರಾದ ಡಿ.ಸಿ.ತಮ್ಮಣ್ಣ, ಎಂ.ಶ್ರೀನಿವಾಸ್, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ನಿರ್ದೇಶಕ ಶಿವಪ್ಪ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಟ್ರಸ್ಟ್ ಅಧ್ಯಕ್ಷ ಡಿ.ಆರ್.ಸ್ವಾಮಿ, ಶಿರಡಿ ಸಾಯಿಬಾಬಾ ಮಂದಿರದ ಧರ್ಮಾಧಿಕಾರಿ ಭಾಸ್ಕರ್, ಮುಖಂಡರಾದ ಗಣಿಗ ರವಿಕುಮಾರ್, ಕೆ.ಕೆ.ರಾಧಾಕೃಷ್ಣ, ಡಾ.ಕೃಷ್ಣ, ಸಿದ್ದರೂಢ ಸತೀಶ್‌ಗೌಡ, ಅಮರಾವತಿ ಚಂದ್ರಶೇಖರ್, ಗ್ರಾಪಂ ಸದಸ್ಯ ದಯಾನಂದ, ಡಿ.ಎಸ್.ಉಮೇಶ್, ಕೃಷ್ಣೇಗೌಡ, ರಾಮಲಿಂಗೇಗೌಡ ಇತರರಿದ್ದರು.