ಮೈಸೂರು: ಧರ್ಮಸ್ಥಳಕ್ಕೆ ಅಪಖ್ಯಾತಿ ತರುವುದನ್ನು ಖಂಡಿಸಿ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಿ ಸೆಪ್ಟೆಂಬರ್ 2ರಂದು ಧರ್ಮಸ್ಥಳಕ್ಕೆ ಪಯಣ ಬೆಳೆಸಲಾಗುತ್ತಿದೆ ಎಂದು ಧರ್ಮಸ್ಥಳ ಭಕ್ತರ ಒಕ್ಕೂಟದ ಸಂಚಾಲಕ ನಾರಾಯಣ ವಿ.ಹೆಗಡೆ ತಿಳಿಸಿದರು.
ಅಂದು ಬೆಳಗ್ಗೆ 5 ಗಂಟೆಗೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸುಮಾರು 10 ಬಸ್‌ಗಳಲ್ಲಿ ಭಕ್ತರು ತೆರಳಲಿದ್ದಾರೆ. ಮಧ್ಯಾಹ್ನ 12ಕ್ಕೆ ಧರ್ಮಸ್ಥಳ ತಲುಪಿ, ಪಾದಯಾತ್ರೆ ಕೈಗೊಂಡು, ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ, ಸಂಜೆ 4ಕ್ಕೆ ಅಲ್ಲಿಂದ ವಾಪಸ್ ಅಗಲಿದ್ದೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧರ್ಮಸ್ಥಳ ನಾಡಿನ ಅತ್ಯಂತ ಶ್ರದ್ಧಾ ಕೇಂದ್ರವಾಗಿದೆ. ಆದರೆ ಇದರ ಮೇಲೆ ಕೆಲ ದುಷ್ಟ ವ್ಯಕ್ತಿಗಳು ಕಣ್ಣು ಹಾಕಿ, ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ಯತ್ನ ಮಾಡಿ, ಧರ್ಮಸ್ಥಳ ಮುಜರಾಯಿ ಇಲಾಖೆಗೆ ಒಳಪಡುವಂತೆ ನೋಡಿಕೊಳ್ಳಲು ಸಂಚು ರೂಪಿಸಿದ್ದಾರೆಂದು ಆರೋಪಿಸಿದರು.
ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ಸುಜಾತಾ ಭಟ್ ಅವರೊಡನೆ ಕೆಲವರು ಕೈಜೋಡಿಸಿದ್ದು, ಅವರೆಲ್ಲರ ಉದ್ದೇಶ ಕ್ಷೇತ್ರಕ್ಕೆ ಕಳಂಕ ತರುವುದೇ ಆಗಿದೆ. ಹೀಗಾಗಿ ವೀರೇಂದ್ರ ಹೆಗ್ಗಡೆ ಅವರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ತಲುಪಿಸಲು ಈ ಯಾತ್ರೆ ಕೈಗೊಳ್ಳಲಾಗುತ್ತಿದೆ. ಭಾಗವಹಿಸುತ್ತಿರುವವರೆಲ್ಲ ಭಕ್ತರೇ ಆಗಿದ್ದಾರೆ. ಇವರೆಲ್ಲರಿಗೂ ಉಚಿತ ಪ್ರಯಾಣ, ಊಟ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಆಯೋಜಕರಾದ ರಾಜೇಶ್‌ಬೋರೆ, ಹೇಮಂತ್, ಮಹಾವೀರ್ ಜೈನ್, ಎಚ್.ವಿ. ಚಂದ್ರ ಇದ್ದರು.