

ಸೋಮವಾರಪೇಟೆ: ಸತ್ಯ, ನ್ಯಾಯ, ಧರ್ಮ ಪರಿಪಾಲನೆಯ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸುವ ವ್ಯಕ್ತಿ ಅಥವಾ ಸಂಸ್ಥೆಯನ್ನು ಸಮಾಜವೇ ಗೌರವಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಅಭಿಪ್ರಾಯಪಟ್ಟರು.
ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ಆಯೋಜಿಸಿದ್ದ ಸುಜ್ಞಾನನಿಧಿ ಶಿಷ್ಯವೇತನ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
ಸಮಾಜಕ್ಕೆ ಸೇವೆ ಮತ್ತು ಪರಿವರ್ತನೆ ಮೂಲಕ ಉತ್ತಮ ಸಂದೇಶವನ್ನು ನೀಡುವುದರೊಂದಿಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಮಾಡುವ ಮೂಲಕ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಹಾಯಹಸ್ತ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಜೆಗುಂಡಿ ಸಾರ್ವಜನಿಕ ಹಿಂದು ರುದ್ರಭೂಮಿ ಅಭಿವೃದ್ಧಿಗೆ ಯೋಜನೆ ವತಿಯಿಂದ 2.50 ಲಕ್ಷ ರೂ. ಸಹಾಯಧನ ಮಂಜೂರು ಮಾಡಲಾಯಿತು. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್.ಮಹೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಚ್.ರೋಹಿತ್, ಜನಜಾಗೃತಿ ವೇದಿಕೆ ಸದಸ್ಯ ಸೋಮೇಶ್, ಸುರೇಶ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಉಮೇಶ್ ಇದ್ದರು.