ಸ್ವಸ್ಥ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರಿ

FotoJet 2222
Published on

ಮುಳಬಾಗಿಲು: ಹಣ, ಹೆಂಡ ಕೊಟ್ಟು ರಾಜಕೀಯ ಕಾರ್ಯಕ್ರಮಕ್ಕೆ ಕರೆಸುವುದು, ಮತ ಕೇಳುವುದು ಸ್ವಸ್ಥ ಸಮಾಜವನ್ನು ಹಾಳು ಮಾಡಲಾಗುತ್ತದೆ. ಜಾತಿ, ಮತ, ಧರ್ಮ ಎಂಬ ಭಿನ್ನಾಭಿಪ್ರಾಯ ಮರೆತು ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಿ ಸುಭದ್ರ ಸಮಾಜ ನಿಮಾರ್ಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೆ.ವಾಸುದೇವ್​ ಹೇಳಿದರು.

ನಗರದ ಜಯಮ್ಮ ಕೃಷ್ಣಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಪ್ರಗತಿ ಬಂಧು ಸಂಘ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಬಡ ಮತ್ತು ಸಾಮಾನ್ಯ ಕುಟುಂಬಗಳ ಅಭಿವೃದ್ಧಿಗೆ ಬ್ಯಾಂಕಿನಿಂದ ಸಾಲ ಕೊಡಿಸಿ ವ್ಯವಹಾರ ನಡೆಸುವ ಮೂಲಕ ಆರ್ಥಿಕ ಸಾಕ್ಷರತೆ, ಸಾವಲಂಭನೆ ತುಂಬಲಾಗುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮನೆ ಇಲ್ಲದವರಿಗೆ ವಾತ್ಸಲ್ಯ ಮನೆ, ನಿರ್ಗತಿಕರಿಗೆ ಮಾಸಾಸನ ನೀಡುವ ಮೂಲಕ ಅರ್ಹರಿಗೆ ಸರ್ಕಾರಕ್ಕಿಂತಲೂ ಹೆಚ್ಚಿನ ಸೌಲಭ್ಯ ತಲುಪಿಸುತ್ತಿದೆ. ಜತೆಗೆ ದುಶ್ಚಟದ ಸೆಳೆತಕ್ಕೆ ಒಳಗಾಗಿರುವ ವ್ಯಕ್ತಿಗಳನ್ನು ಗುರುತಿಸಿ ವ್ಯಸನಮುಕ್ತ ಸಮಾಜ ನಿಮಾರ್ಣ ಮಾಡಲು ಧರ್ಮಸ್ಥಳ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ಬೈರಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್​ ಮಾತನಾಡಿ, ಗಾಂಧೀಜಿ ತತ್ವವನ್ನು ನಾವು ಪಾಲಿಸಿದರೆ ಸ್ವಸ್ಥ ಸಮಾಜ ನಿಮಾರ್ಣ ಸಾಧ್ಯ. ಈ ನಿಟ್ಟಿನಲ್ಲಿ ಹೆಗ್ಗಡೆಯವರು ಕಾರ್ಯಮಗ್ನರಾಗಿದ್ದಾರೆ ಎಂದು ತಿಳಿಸಿದರು.

ಶಾಲಾ-, ಕಾಲೇಜಿಗೆ ಹೋಗಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮದ ಮೂಲಕ ತಾಲೂಕಿನ 87 ಶಾಲೆಯ 10,000 ವಿದ್ಯಾರ್ಥಿಗಳಿಗೆ ದುಶ್ಚಟದಿಂದ ದೂರವಿರಿ ಎಂಬ ತರಬೇತಿ ಮಾಡಿದ್ದಾರೆ. ಈ ವರ್ಷ ಮುಳಬಾಗಿಲು ತಾಲೂಕಿನ ಸರ್ಕಾರಿ ಶಾಲೆಗಳಿಗೆ 96 ಜತೆ ಡೆಸ್ಕ್​ ಬೆಂಚು ನೀಡಿದ್ದಾರೆ ಎಂದು ತಿಳಿಸಿದರು.

ಹನುಮನಹಳ್ಳಿ ಶಂಕರ್​, ವಿರುಪಾಕ್ಷಿ ಶಿವಣ್ಣ, ಪೆತ್ತಂಡಹಳ್ಳಿ ಗ್ರಾಪಂ ಸದಸ್ಯರ ಶಂಕರ್​, ಮೇಲ್ವಿಚಾರಕರಾದ ಮುದ್ದಣ್ಣ, ಆಶಾ, ಹೇಮಾವತಿ, ಅಶ್ವಿನಿ, ಹೇಮಂತ್​, ಪ್ರಶಾಂತ್​, ನಿಶಾಂತ್​, ಶೇಖರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net