ಕೆರೆಗಳನ್ನು ನಿರ್ವಹಣೆ ಮಾಡಿದರೆ ರೈತರ ಬದುಕು ಹಸನು

29 nmt
Published on

ನ್ಯಾಮತಿ: ರೈತರ ಜೀವನಾಡಿಗಳಾದ ಕೆರೆ ಕಟ್ಟೆಗಳ ಪುನಶ್ಚೇತನಕ್ಕಾಗಿ ವೀರೇಂದ್ರ ಹೆಗ್ಗಡೆ ಅವರು 2016 ರಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಹೇಳಿದರು.

ತಾಲೂಕಿನ ಒಡೆಯರ ಹತ್ತೂರು ಗ್ರಾಮದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಒಡೆಯರ ಹತ್ತೂರು ಗ್ರಾಪಂ ವ್ಯಾಪ್ತಿಯ ಕೆರೆ ಅಭಿವೃದ್ಧಿ ಸಮಿತಿ, ಪ್ರಗತಿ ಬಂಧು ಸ್ವ- ಸಹಾಯ ಸಂಘಗಳು, ಗ್ರಾಮದ ರೈತ ಸಮುದಾಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಯ್ಯನಕೆರೆ ಹೂಳೆತ್ತುವ ಮೂಲಕ ಕೆರೆಗಳ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಯ್ಯನ ಕೆರೆಯು ಸುಮಾರು 26 ಎಕರೆ ವಿಸ್ತೀರ್ಣವಿದ್ದು, ಇದರ ಪುನಶ್ಚೇತನ ಕೆಲಸದ ನಂತರ ಮಳೆಗಾಲದಲ್ಲಿ ನೀರು ತುಂಬಿದರೆ ಇದರಿಂದ ಸುತ್ತಮುತ್ತಲಿನ ಕೊಳವೆ ಬಾವಿಗಳು ಅಂತರ್ಜಲದಿಂದ ಮರುಜೀವ ಪಡೆದು ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಜತೆಗೆ ಜಾನುವಾರು, ಪ್ರಾಣಿ, ಪಕ್ಷಿಗಳಿಗೂ ನೀರು ಒದಗಿದಂತಾಗುತ್ತದೆ. ಇಂತಹ ಉತ್ತಮ ಕೆಲಸವನ್ನು ರೈತರು, ಗ್ರಾಮದವರು, ಸಂಘ- ಸಂಸ್ಥೆಗಳು ಒಗ್ಗಟ್ಟಾಗಿ ಸೇರಿ ಮಾಡಬೇಕು ಎಂದು ಸಲಹೆ ನೀಡಿದರು.

ಈ ಯೋಜನೆಯಿಂದ ರಾಜ್ಯದಲ್ಲಿ ಇದುವರೆಗೆ ಸುಮಾರು 850 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಲ್ಲಿ 5 ಕಡೆಗಳಲ್ಲಿ ಕೆರೆಗಳ ಹೊಳೆತ್ತುವ ಕಾರ್ಯ ನಡೆದಿದೆ ಎಂದರು.

ರಾಜ್ಯ ಅಲ್ಪಸಂಖ್ಯಾತ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ ಮಾತನಾಡಿದರು.

ಹೊನ್ನಾಳಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ. ಬಸಪ್ಪ, ನ್ಯಾಮತಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ನಿವೃತ್ತ ಶಿಕ್ಷಕ ಚನ್ನಪ್ಪ ಹಾಲೇಶ್, ಧರ್ಮಸ್ಥಳ ಸಂಸ್ಥೆಯ ಕೃಷಿ ವಿಭಾಗದ ಮೇಲ್ವಿಚಾರಕ ಪ್ರೇಮ್ ಕುಮಾರ್, ಮುಖಂಡ ಹಾಲೇಶ್, ಪ್ರಗತಿ ಬಂಧು ಮಹಿಳಾ ಸ್ವ- ಸಹಾಯ ಸಂಘಗಳ ಸದಸ್ಯರು, ಸೇವಾಪ್ರತಿನಿಧಿಗಳು ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net