ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒತ್ತು

ಎಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ವಿಜಯಕುಮಾರ್, ಭಾಸ್ಕರ್, ಶಾಂತಮ್ಮ, ಶಾಂತಾ ಇದ್ದರು.
ಎಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ವಿಜಯಕುಮಾರ್, ಭಾಸ್ಕರ್, ಶಾಂತಮ್ಮ, ಶಾಂತಾ ಇದ್ದರು.
Published on

ಎಚ್.ಡಿ.ಕೋಟೆ: ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒತ್ತು ನೀಡಿದ್ದು, ಇದರಿಂದ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್‌ನ ಹಿರಿಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ತಿಳಿಸಿದರು.

ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಆರ್ಥಿಕ ಸಬಲತೆ, ಪೌಷ್ಟಿಕ ಆಹಾರ ಸೇವನೆ ಕುರಿತು ಮಾಹಿತಿ, ಕಾನೂನು ಅರಿವು, ರೈತರಿಗೆ ಆಧುನಿಕ ತರಬೇತಿ, ಮಹಿಳೆಯರಿಗೆ ಹೊಲಿಗೆ ಯಂತ್ರ ತರಬೇತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಹಿಳೆಯರಿಗಾಗಿ ಹಮ್ಮಿಕೊಂಡಿದೆ ಎಂದರು.

ವಕೀಲೆ ಶಾಂತಾ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಕಡಿಮೆಯಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಬೇಸರಿಸಿದರು.

ಆದಿವಾಸಿ ಮಹಿಳೆಯನ್ನು ಹೆರಿಗೆ ಸಮಯದಲ್ಲಿ ಹೊರಹಾಕುವ ಪದ್ಧತಿ ಕೆಲ ಹಾಡಿಯಲ್ಲಿ ಜೀವಂತ ಇರುವುದು ಶೋಚನೀಯ. ಇಂತಹ ಪದ್ಧತಿಯನ್ನು ಈಗಲೂ ಪಾಲಿಸುತ್ತಿರುವ ಕುರಿತು ಪ್ರತಿಕೆಗಳಲ್ಲಿ ವರದಿಯಾಗಿದೆ. ಇಂತಹ ಮೂಢನಂಬಿಕೆಯಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ ಎಂದರು.

ಕ್ಷೇತ್ರ ಯೋಜನಾಧಿಕಾರಿ ವಿ.ಭಾಸ್ಕರ್ ಮಾತನಾಡಿ, ತಾಲೂಕಿನ 180 ನಿರ್ಗತಿಕರಿಗೆ ಪ್ರತಿ ತಿಂಗಳು ಮಾಸಾಶನ ನೀಡುವುದರ ಜತೆಗೆ ಗುಡಿಸಿನಲ್ಲಿ ವಾಸಿಸುತ್ತಿರುವ 4 ಫಲಾನುಭವಿಗಳಿಗೆ ಮನೆ ಕಟ್ಟಿಸಿಕೊಡಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯೆ ಶಾಂತಮ್ಮ, ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ್, ಮಹಿಳಾ ಸಾಂತ್ವನ ಕೇಂದ್ರ ಆಪ್ತ ಸಮಾಲೋಚಕಿ ಜಸೀಲಾ, ಸಬ್ ಇನ್‌ಸ್ಪೆಕ್ಟರ್ ಸುರೇಶ್ ನಾಯಕ್, ಸಂಸ್ಥೆಯ ಕೃಷಿ ಮೇಲ್ವಿಚಾರಕ ರಾಜು, ಬಿ.ಜೆ. ಜ್ಞಾನವಿಕಾಸ ಸಮನ್ವಯಾಧಿಕಾರಿ ಮಲ್ಲಮ್ಮ, ಮೇಲ್ವಿಚಾರಕರಾದ ಕೃಷ್ಣಮೂರ್ತಿ, ಭಾರತಿ, ವೀಣಾ, ರೇಖಾ, ಸಂಸ್ಥೆಯ ಕಾರ್ಯಕರ್ತೆಯರಾದ ಪ್ರತಿಮಾ ದೇವರಾಜು, ವಿದ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net