

ಕೊಂಡ್ಲಹಳ್ಳಿ: ಜನರಿಗೆ ಉತ್ತಮ ಬದುಕು ಕಟ್ಟಿಕೊಡುವ ಗುರಿಯನ್ನು ವೀರೇಂದ್ರ ಹೆಗ್ಗಡೆ ಅವರು ಹೊಂದಿದ್ದು, ಈ ಕಾರಣಕ್ಕೆ ನಾಡಿನಲ್ಲಿ ಅನೇಕ ಜನೋಪಯೋಗಿ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ವತಿಯಿಂದ ಮಾಡಲಾಗುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ತಿಳಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಕೋನಸಾಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನವಜೀವನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳ್ಳಿಗಳಲ್ಲಿ ಕೆರೆ ಹೂಳೆತ್ತಿ ಜನರಿಗೆ ನೀರು ಕೊಡುವ ಮಹತ್ ಕಾರ್ಯ ಮಾಡಲಾಗುತ್ತಿದೆ. ಆಳುವ ವರ್ಗ ನಮ್ಮ ಕಾರ್ಯಕ್ಕೆ ಕೈಜೋಡಿಸುವ ಕೆಲಸ ಮಾಡಬೇಕು. ಮದ್ಯಪಾನ ಮುಕ್ತ ನಾಡು ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಜನಜಾಗೃತಿ ವೇದಿಕೆ ಯೋಜನಾಧಿಕಾರಿ ನಾಗೇಶ್ ಮಾತನಾಡಿ, ಪಾನಮುಕ್ತ ದೇಶದ ಬಾಪೂಜಿಯ ಕನಸಾಗಿತ್ತು. ಇದನ್ನು ಸಾಕಾರಗೊಳಿಸುವ ಹಾದಿಯಲ್ಲಿ ಧರ್ಮಸ್ಥಳ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಸದಸ್ಯ ಟಿ.ರೇವಣ್ಣ ಮಾತನಾಡಿ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಜಯಂತಿ ಆಚರಿಸುವ ನಾವು ಅವರ ಆದರ್ಶಗಳನ್ನು ಮರೆತಿದ್ದೇವೆ ಎಂದು ವಿಷಾದಿಸಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಡಿ.ಷಡಾಕ್ಷರಪ್ಪ ಅಧ್ಯಕ್ಷತೆ ವಹಿಸಿದ್ದರು. ವಕೀಲೆ ವಿಜಯಲಕ್ಷ್ಮಿ, ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ ಮಾತನಾಡಿದರು.
ಮದ್ಯವರ್ಜನ ಶಿಬಿರದಿಂದ ಪಾನಮುಕ್ತರಾದ ನವಜೀವನ ಸಮಿತಿ ಸದಸ್ಯರನ್ನು ಈ ವೇಳೆ ಸನ್ಮಾನಿಸಲಾಯಿತು.