ಗ್ರಾಮೀಣಾಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆ ಆದ್ಯತೆ

unnamed
ಹಿರೀಸಾವೆ ಹೋಬಳಿಯ ಎಚ್.ಚಿಕ್ಕೋನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ರಾಘವೇಂದ್ರ ಮಾತನಾಡಿದರು.ಪುರಂದರ್, ಅರ್ಪಿತಾ, ಪರಮೇಶ್, ಒಕ್ಕೂಟದ ಅಧ್ಯಕ್ಷೆ ನಳಿನಮ್ಮ, ಯೋಜನೆಯ ಕೃಷಿ ಅಧಿಕಾರಿ ಮಹದೇವ ಪ್ರಸಾದ್, ಆಶಾ, ಎಂ.ಆರ್.ಚಲುವರಾಯಸ್ವಾಮಿ ಇದ್ದರು.
Published on

ಹಿರೀಸಾವೆ: ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವುದಷ್ಟೇ ಅಲ್ಲದೇ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಯೋಜನಾಧಿಕಾರಿ ಪುರಂದರ್ ಹೇಳಿದರು.

ಹೋಬಳಿಯ ಎಚ್.ಚಿಕ್ಕೋನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪಾಠಶಾಲೆಯಲ್ಲಿ ಯೋಜನೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡಿರುವ ಅದೆಷ್ಟೋ ಕುಟುಂಬಗಳು ಆರ್ಥಿಕವಾಗಿ ಸದೃಢಗೊಂಡಿವೆ ಎಂದರು.

ಶ್ರೀಕ್ಷೇತ್ರದ ಖಾವಂದರ ಮುಂದಾಲೋಚನೆಯೊಂದಿಗೆ 1982 ರಲ್ಲಿ ಪ್ರಾರಂಭಗೊಂಡಿರುವ ಯೋಜನೆ ರಾಜ್ಯದೆಲ್ಲೆಡೆ ವಿಸ್ತಾರಗೊಂಡಿದ್ದು, ಶೇ.14 ಬಡ್ಡಿ ರೂಪದಲ್ಲಿ ಬ್ಯಾಂಕ್ ಸಹಕಾರದೊಂದಿಗೆ ಹಂತ ಹಂತವಾಗಿ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಸಂಕಷ್ಟದಲ್ಲಿರುವ ಜನತೆಗೆ ನೆರವಾಗಿ ನಿಂತಿದೆ ಎಂದು ತಿಳಿಸಿದರು.

ಜನ ಜಾಗೃತಿ ವೇದಿಕೆ ಅಧ್ಯಕ್ಷ ಬೆಕ್ಕ ರಾಘವೇಂದ್ರ ಮಾತನಾಡಿ, ತಮಗಿಷ್ಟ ಬಂದಂತೆ ಬದುಕುವ ಬರದಲ್ಲಿ ಪರಿಸರದ ಮೇಲೆ ದಾಳಿ ಮಾಡುವ ಮೂಲಕ ಪ್ರಕೃತಿಯನ್ನು ಕಡೆಗಣಿಸುತ್ತಿದ್ದೇವೆ. ಪರಿಣಾಮ ಸಮತೋಲನ ಕಳೆದುಕೊಂಡಿರುವ ಪ್ರಕೃತಿ ವಿಕೋಪಗೊಂಡಿದ್ದು ಪ್ರವಾಹ, ಬರ ಸೇರಿದಂತೆ ವಿವಿಧ ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರದಲ್ಲಿ ಬೆಳೆದಿರುವ ಹಾಗೂ ಕಾಣಸಿಗುವ ಪ್ರತಿಯೊಂದು ಸಸ್ಯಗಳಲ್ಲಿಯೂ ಔಷಧೀಯ ಗುಣವಿದೆ. ಕೃಷಿ ಚಟುವಟಿಕೆ, ನಗರಿಕರಣ ಹಾಗೂ ಇನ್ನಿತರ ಸಲುವಾಗಿ ಹಂತ ಹಂತವಾಗಿ ಎಲ್ಲವನ್ನು ನಾಶ ಪಡಿಸುತಿದ್ದು, ಆರೋಗ್ಯ ಕೆಟ್ಟಲ್ಲಿ ಇಂಗ್ಲಿಷ್ ಮೆಡಿಸಿನ್ ಬಳಸಲು ಮುಂದಾಗುತ್ತಿದ್ದೇವೆ. ಪರಿಸರ ಉತ್ತಮವಾಗಿದ್ದಲ್ಲಿ ಆರೋಗ್ಯ ವೃದ್ಧಿಯಾಗಲಿದೆ ಎಂದು ತಿಳಿಸಿದರು.

ಶ್ರವಣಬೆಳಗೊಳ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ಅಧಿಕಾರಿ ಅರ್ಪಿತಾ ಮಾತನಾಡಿ, ರೈತರು ವರ್ಷಕ್ಕೊಮ್ಮೆ ತಮ್ಮ ಕೃಷಿ ಜಮೀನಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಫಲಿತಾಂಶದ ಆಧಾರದ ಮೇಲೆ ಕೃಷಿ ಅಧಿಕಾರಿಗಳ ಮಾರ್ಗದರ್ಶನದಂತೆ ಬೆಳೆಗಳಿಗೆ ಗೊಬ್ಬರ ನೀಡುವ ವ್ಯವಸ್ಥೆ ಮಾಡಿಕೊಳ್ಳಬೇಕು. ಜತೆಗೆ ಒಂದೇ ಬೆಳೆಯನ್ನು ಪದೇ ಪದೆ ಬೆಳೆಯುವ ರೂಡಿ ಕೈಬಿಟ್ಟು ಬೇರೆ ಬೆಳೆಗಳನ್ನು ಬೆಳೆಯುವ ಪದ್ಧತಿ ಅನುಸರಿಸಬೇಕು. ಇದರಿಂದ ಉತ್ತಮ ಫಸಲಿನೊಂದಿಗೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಯೋಜನೆ ವತಿಯಿಂದ ಶಾಲಾ ಆವರಣದಲ್ಲಿ ವಿವಿಧ ಬಗೆಯ ಔಷಧಿಯ ಗಿಡಗಳನ್ನು ನೆಡುವುದರ ಜತೆಗೆ ಪರಿಸರ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಲಾಯಿತು.

ವಲಯದ ಮೇಲ್ವಿಚಾರಕ ಪರಮೇಶ್, ಒಕ್ಕೂಟದ ಅಧ್ಯಕ್ಷೆ ನಳಿನಮ್ಮ, ಯೋಜನೆಯ ಕೃಷಿ ಅಧಿಕಾರಿ ಮಹದೇವ ಪ್ರಸಾದ್, ಸೇವಾ ಪ್ರತಿನಿಧಿ ಆಶಾ, ಶಾಲಾ ಮುಖ್ಯಶಿಕ್ಷಕ ಎಂ.ಆರ್.ಚಲುವರಾಯಸ್ವಾಮಿ, ಸಹಶಿಕ್ಷಕ ಕೆ.ಮೋಹನ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net