

ಮಂಡ್ಯ: ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ದುಡಿಯುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಒತ್ತಾಯಿಸಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಬೇವಿನಹಳ್ಳಿ ಗ್ರಾಮದ ಸೋಮೇಶ್ವರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಒಕ್ಕೂಟದ ಪದಗ್ರಹಣ ಹಾಗೂ ಸತ್ಯನಾರಾಯಣಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಕನ್ನಡದ ಡಾ.ವೀರೇಂದ್ರ ಹೆಗ್ಗಡೆ ಅವರು ರಾಜ್ಯದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿದೆ. ಇದರಿಂದಾಗಿ ಚಿಂತಕರ ಚಾವಡಿ ಎನಿಸಿಕೊಂಡಿರುವ ರಾಜ್ಯಸಭೆಗೆ ಶೋಭೆ ಬಂದಂತಾಗಿದೆ. ಧರ್ಮಸ್ಥಳ ಎಂದರೆ ವಿಶ್ವವಿಖ್ಯಾತಿ ಪಡೆದಿದೆ. ಆದ್ದರಿಂದ ಕೇಂದ್ರ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು. ಇನ್ನು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಡಾ.ಹೇಮಾವತಿ ವಿ.ಹೆಗ್ಗಡೆ ಅವರು ದೈವಮಾನವರು. ಆದ್ದರಿಂದ ಅವರು ಶಿವ, ಪಾವರ್ತಿಯಂತೆ ಎಂದು ಬಣ್ಣಿಸಿದರು.
ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಸಿ. ಯೋಗೇಶ್, ಸದಸ್ಯ ಬಿ.ಎಂ. ಮಹೇಶ್, ಟ್ರಸ್ಟ್‌ನ ನಿರ್ದೆಶಕಿ ಎಂ. ಚೇತನಾ, ನಿರ್ಮಲಾ, ಡಾ. ಮಂಜೇಶ್‌ಗೌಡ, ಸೋಮಶಂಕರೇಗೌಡ, ಅಭಿಷೇಕ್, ಮಾಯಣ್ಣ ಇತರರಿದ್ದರು.