

ಬೆಳ್ತಂಗಡಿ: ಭಕ್ತರ ಮನಸ್ಸಲ್ಲಿ ಶ್ರೀ ಮಂಜುನಾಥ ಸ್ವಾಮಿ ಸಾಕ್ಷಾತ್ ರೂಪವಾಗಿ ಇದ್ದಾನೆ ಎನ್ನುವುದಕ್ಕೆ ರಾಜ್ಯಾದ್ಯಂತ ಸ್ವಾಮಿಯ ಭಕ್ತರು ಅಧಿಕವಾಗಿರುವುದೇ ಸಾಕ್ಷಿ. ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರದ ದಾನ, ಧರ್ಮ ಇಮ್ಮಡಿಯಾಗುತ್ತಿದ್ದು, ಇದರಿಂದ ಧನ್ಯತೆ ಇದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ 8ನೇ ವರ್ಷ ಆಗಮಿಸಿದ ಪಾದಯಾತ್ರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮಗಳು ಇಮ್ಮಡಿಯಾಗುತ್ತಿವೆ. ಕಳೆದ ಮೂರು ತಿಂಗಳಿನಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 4 ಲಕ್ಷ ಸದಸ್ಯರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಪ್ರತಿಯೊಬ್ಬರೂ ಬದುಕಿನಲ್ಲಿ ಪರಿವರ್ತನೆ ಬಯಸುತ್ತಾರೆ, ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆತ್ಮವಿಶ್ವಾಸ ತುಂಬುತ್ತದೆ ಎಂದರು.
ಆರೋಗ್ಯದ ರಕ್ಷಣೆ ಜವಾಬ್ದಾರಿ: ಕರೊನಾ ಮಹಾಮಾರಿಯಿಂದ ಜನಜೀವನ ದುಸ್ತರಗೊಂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದೇವರ ಅನುಗ್ರಹದಿಂದ ಸಾಮಾನ್ಯದತ್ತ ಮರಳುತ್ತಿದೆ. ಪ್ರತಿಯೊಬ್ಬರೂ ಆರೋಗ್ಯದ ರಕ್ಷಣೆ, ಬದುಕನ್ನು ರಕ್ಷಣೆ ಮಾಡಿಕೊಳ್ಳಬೇಕು. ಕರೊನಾ ಸಂದರ್ಭದಲ್ಲಿ ಯೋಜನೆಯ ವತಿಯಿಂದ ನೀಡುವ ಮಾಶಾಸನವನ್ನು ಮನೆ ಮನೆಗೆ ತೆರಲಿ ನೀಡಲಾಗಿದೆ. ಇಂತಹ ಕುಟುಂಬಗಳನ್ನು ಇನ್ನಷ್ಟು ಸಮೀಕ್ಷೆ ನಡೆಸಿ ಹೇಮಾವತಿ ವಿ.ಹೆಗ್ಗಡೆಯವರ ಕಲ್ಪನೆಯಂತೆ ವಾತ್ಸಲ್ಯ ಯೋಜನೆಯನ್ನು ಪ್ರಾರಂಭಿಸಿದ್ದು, ನೊಂದವರ, ಅನಾಥರ ಸೇವೆಯನ್ನು ಮಾಡಲಾಗುವುದು ಎಂದು ಡಾ.ಹೆಗ್ಗಡೆ ಹೇಳಿದರು.
ಉದ್ಯಮಿ, ಬದುಕು ಕಟ್ಟೋಣ ತಂಡದ ರುವಾರಿ ರಾಜೇಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, 7 ವರ್ಷಗಳ ಹಿಂದೆ ಲಕ್ಷದೀಪೋತ್ಸವ ಪ್ರಯುಕ್ತ ಪ್ರಾರಂಭವಾದ ಪಾದಯಾತ್ರೆ ತಾಲೂಕಿಗೆ ಹಾಗೂ ರಾಜ್ಯಕ್ಕೆ ಶಕ್ತಿ ತುಂಬಿದೆ. ಬೆಂಗಳೂರು ಇನ್ನಿತರ ಭಾಗದಿಂದ ಶಿವರಾತ್ರಿ ಪ್ರಯುಕ್ತ ಸಾವಿರಾರು ಮಂದಿ ನಡೆಸುವ ಪಾದಯಾತ್ರೆ ಈ ಪಾದಯಾತ್ರೆಗೆ ಪ್ರೇರಣೆ. ಇದರಲ್ಲಿ ನಿಸ್ವಾರ್ಥವಾಗಿ ಭಾಗವಹಿಸಿದ್ದ ಮೂವರು ಶಾಸಕರಾಗಿದ್ದು, ಮಂಜುನಾಥ ಸ್ವಾಮಿಯ ಅನುಗ್ರಹಕ್ಕೆ ಸಾಕ್ಷಿ ಎಂದರು.
ಡಿ.ಹರ್ಷೇಂದ್ರ ಕುಮಾರ್, ಉಜಿರೆ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಯಶೋವರ್ಮ ಉಪಸ್ಥಿತರಿದ್ದರು. ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಎಸ್‌ಡಿಎಂನಲ್ಲಿ ಗುಣಮಟ್ಟದ ಶಿಕ್ಷಣ: ಇಂದು ದೇಶದಾದ್ಯಂತ 565 ರುಡ್‌ಸೆಟ್ ಸಂಸ್ಥೆ ಸ್ವ ಉದ್ಯೋಗ ತರಬೇತಿ ನೀಡುತ್ತಿದ್ದು, ತರಬೇತಿ ಪಡೆದವರು ಶ್ರೀಮಂಜುನಾಥ ಸ್ವಾಮಿಯ ಅನುಗ್ರಹವೇ ನಮಗೆ ಶಕ್ತಿ ಎಂದು ಸ್ವಾವಲಂಬಿ ಜೀವನ ನಡೆಸಲು ಮುಂದಾಗುತ್ತಿದ್ದಾರೆ. ಕ್ಷೇತ್ರದಿಂದ ದೇವಸ್ಥಾನಗಳ ಜೀರ್ಣೋದ್ಧಾರಗಳಿಗೆ ನೆರವು ನೀಡುತ್ತಿದ್ದು, ಈ ವರ್ಷ 1135 ದೇವಸ್ಥಾನಗಳಿಗೆ ನೆರವು ನೀಡಲಾಗಿದೆ. ಧರ್ಮಸ್ಥಳದ ವತಿಯಿಂದ ನಡೆಸುವ ಶಿಕ್ಷಣ ಸಂಸ್ಥೆಗಳು ಶಿಸ್ತು ಮತ್ತು ಬದ್ಧತೆಗೆ ಹೆಸರುವಾಸಿ. ಕರೊನಾ ಭೀತಿಯ ನಡುವೆಯೂ ನಮ್ಮ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಸೀಟ್‌ಗಳು ಭರ್ತಿಯಾಗಿರುವುದು ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿ ಎಂದು ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಇಂದು ಕೆರೆಕಟ್ಟೆ ಉತ್ಸವ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಗುರುವಾರ ಆರಂಭಗೊಂಡಿದೆ. ಮೊದಲ ದಿನ ಗುರುವಾರ ರಾತ್ರಿ ಹೊಸಕಟ್ಟೆ ಉತ್ಸವವಿದ್ದು, ಶುಕ್ರವಾರ ಕೆರೆಕಟ್ಟೆ ಉತ್ಸವ ನೆರವೇರಲಿದೆ. 12ರಂದು ಲಲಿತೋದ್ಯಾನ ಉತ್ಸವ, 13ರಂದು ಕಂಚಿಮಾರುಕಟ್ಟೆ ಉತ್ಸವ, 14ರಂದು ಗೌರಿಮಾರುಕಟ್ಟೆ ಉತ್ಸವಗಳು ನಡೆಯಲಿವೆ.
ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ಬಾರಿಯ ಲಕ್ಷದೀಪೋತ್ಸವದಲ್ಲಿ ವಸ್ತುಪ್ರದರ್ಶನ, ಸಂತೆ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲರೂ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಜಾಗ್ರತೆ ವಹಿಸಬೇಕು.
- ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ