ನಿರ್ಗತಿಕರಿಗೆ ಮನೆ, ಕೆರೆಗಳ ಪುನಶ್ಚೇತನ: ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾಹಿತಿ

1 (1)
Published on

ಮಂಡ್ಯ: ಗ್ರಾಮೀಣ ಜನರ ಬದುಕನ್ನು ಹಸನಾಗಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಪ್ರಾರಂಭಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹತ್ತು ವರ್ಷ ಪೂರೈಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲ ಚಟುವಟಿಕೆ ನಡೆಸಲು ಸಜ್ಜಾಗಿದ್ದೇವೆ ಎಂದು ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಯೋಜನೆಯಲ್ಲಿ ಜಿಲ್ಲೆ ಎ ಗ್ರೇಡ್ ಜತೆಗೆ ಉತ್ತಮ ಸಾಧನೆ ಮಾಡಿದೆ. ಈಗಾಗಲೇ ಹಲವು ವಿಶೇಷ ಕಾರ್ಯಕ್ರಮಗಳ ಮೂಲಕ ಜನರಿಗೆ ಸೇವೆ ಸಲ್ಲಿಸಿದ್ದೇವೆ. ಅದೇ ರೀತಿ ನಿರ್ಗತಿಕರಿಗೆ ಮನೆ, ಮಾಶಾಸನ, ಕೆರೆಗಳ ಪುನಶ್ಚೇತನ ಹಾಗೂ ಬೀದಿಬದಿ ವ್ಯಾಪಾರಿಗಳನ್ನು ಸಂಘಟಿಸಿ ಸ್ವ ಸಹಾಯ ಸಂಘಕ್ಕೆ ಸೇರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ವಿವರಿಸಿದರು.

ಪ್ರಕೃತಿ ವಿಕೋಪದಿಂದ ಮಳೆಯ ಕೊರತೆಯಾಗಿದ್ದು, ವರ್ಷಗಳು ಕಳೆದಂತೆ ಅಂತರ್ಜಲ ಮಟ್ಟದ ಕುಸಿತ ಮತ್ತು ಪರಿಸರ ಅಸಮತೋಲನ ಹೋಗಲಾಡಿಸಲು ‘ನಮ್ಮೂರ ಕೆರೆ’ ಯೋಜನೆಯಡಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ 126 ಲಕ್ಷ ರೂ ಅನುದಾನದಲ್ಲಿ 16 ಕೆರೆಗಳನ್ನು ಅಭಿವೃದ್ಧಿಪಡಿಸಿ 6,053 ಕುಟುಂಬಗಳಿಗೆ ನೀರು ಹಾಗೂ 3 ಸಾವಿರ ಎಕರೆ ಜಮೀನಿಗೆ ಅಂತರ್ಜಲ ಒದಗಿಸಲಾಗಿದೆ. ಯಾವುದೇ ಕೆರೆಗಳ ಅಭಿವೃದ್ಧಿಪಡಿಸಬೇಕಾದರೆ ಗ್ರಾಮಸ್ಥರು ನಮ್ಮ ಸಂಘದ ಗಮನಕ್ಕೆ ತಂದರೆ ಮುಂದಿನ ಕ್ರಮ ವಹಿಸುತ್ತೇವೆ ಎಂದು ಹೇಳಿದರು.

ಜನ ಕಲ್ಯಾಣ ಕಾರ್ಯಕ್ರಮವನ್ನು ಯಶಸ್ವಿ ಅನುಷ್ಠಾನಗೊಳಿಸಲು 837 ಕಾರ್ಯಕರ್ತರು, ತಮ್ಮನ್ನು ತಾವು ಕೊಡಗಿಸಿಕೊಂಡು ಯೋಜನೆಯ ಯಶಸ್ಸಿಗೆ ನಿರಂತರ ಸೇವೆಯನ್ನು ನೀಡುತ್ತಿದ್ದಾರೆ. ಗ್ರಾಮ ಮಟ್ಟದಲ್ಲಿ ಸೇವಾ ಪ್ರತಿನಿಧಿಗಳು, ಮೇಲ್ವಿಚಾರಕರು, ಯೋಜನಾಧಿಕಾರಿಗಳು ವಿವಿಧ ರೀತಿಯ ಹುದ್ದೆಯಲ್ಲಿ ಜನಸಾಮಾನ್ಯರ ಮನೆ ಬಾಗಿಲಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಗತಿಗೆ ಸಹಕರಿಸುತ್ತಿದ್ದಾರೆ. ಸಂಘಟನೆಯ ಮೂಲಕ ಪ್ರಗತಿಯನ್ನು ಸಾಧಿಸಲು ಕೂಲಿ ಕಾರ್ಮಿಕರ, ಕೃಷಿಕರ, ಮಹಿಳೆಯರ, ದುರ್ಬಲ ವರ್ಗದವರನ್ನು ಸಂಘಟಿಸಿ ಉಳಿತಾಯದ ಮನೋಭಾವನೆಯ ಮೂಲಕ ಅರಿವು ಮೂಡಿಸಿ, ವಾರಕ್ಕೊಮ್ಮೆ ಸೇರಿ ಅವರ ಸಮಗ್ರ ಅಭಿವೃದ್ಧಿಗೆ ಚಿಂತಿಸಿ ಉಳಿತಾಯ, ಆರ್ಥಿಕ ಶಿಸ್ತು ಮೂಡಿಸಲು ಇದುವರೆಗೆ 16,381 ಸ್ವ ಸಹಾಯ ಸಂಘಗಳನ್ನು ರಚನೆ ಮಾಡಲಾಗಿದೆ. ಪ್ರಸ್ತುತ ವರ್ಷ 1.41 ಲಕ್ಷ ಸದಸ್ಯರಿದ್ದು, ಒಟ್ಟು 90.96 ಕೋಟಿ ರೂ ಉಳಿತಾಯ ಮಾಡಿ ವಿವಿಧ ಬ್ಯಾಂಕ್‌ಗಳಲ್ಲಿ ಜಮೆ ಮಾಡಲಾಗಿದೆ ಎಂದರು.

ಸ್ವಸಹಾಯ ಸಂಘದ ಸದಸ್ಯರ ಕೃಷಿ ಅಭಿವೃದ್ಧಿ, ಹೈನುಗಾರಿಕೆ, ಸ್ವ ಉದ್ಯೋಗ ಹಾಗೂ ಮೂಲ ಸೌಕರ್ಯಕ್ಕೆ ಬೇಕಾದ ಆರ್ಥಿಕ ಅವಶ್ಯಕತೆಗಳನ್ನು ಪೊರೈಸಲು ಬ್ಯಾಂಕ್‌ಗಳಿಂದ ನೇರ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಮನೆ ಬಾಗಿಲಿಗೆ ಸುಲಭ ರೀತಿಯಲ್ಲಿ ಸೌಲಭ್ಯ ಒದಗಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಮೂಲಕ ಕೋಟ್ಯಂತರ ರೂ ಆರ್ಥಿಕ ನೆರವನ್ನು ಒದಗಿಸಲಾಗಿದೆ. ಸಂಘಗಳ ಸದಸ್ಯರ, ಹೊರಬಾಕಿ ಪ್ರತಿನಿಧಿ 577.77 ಕೋಟಿ ರೂ ಇದ್ದು, ವಾರದ ಕಂತಿನಲ್ಲಿ ಶೇ.100 ಮರುಪಾವತಿ ಮಾಡುವುದರೊಂದಿಗೆ ಪಾಲುದಾರ ಬಂಧುಗಳು ಸಾಲದ ಸದ್ವಿನಿಯೋಗ ಮಾಡಿಕೊಂಡು ಪ್ರಗತಿಯತ್ತ ಸಾಗುತ್ತಿದ್ದಾರೆ ಎಂದು ವಿವರಿಸಿದರು.

ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರ. ಈ ದೃಷ್ಟಿಯಿಂದ ಹೇಮಾವತಿ ವಿ.ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದನ್ವಯ ಮಹಿಳೆಯರಿಗೆ, ಕೌಟುಂಬಿಕ ಸಾಮರಸ್ಯ, ಆರೋಗ್ಯ ಮತ್ತು ನೈರ್ಮಲ್ಯ, ಮಕ್ಕಳ ಶಿಕ್ಷಣ, ಸರ್ಕಾರಿ ಯೋಜನೆಗಳು, ಕಾನೂನು ಸಲಹೆಗಳು ಹಾಗೂ ಸ್ವ-ಉದ್ಯೋಗದ ಕುರಿತು ಮಾಹಿತಿ ಒದಗಿಸಲು 4 ರಿಂದ 5 ಸಂಘಗಳು ತಿಂಗಳಿಗೊಮ್ಮೆ ಒಂದು ಕಡೆ ಸೇರಿ ಸಮಾಲೋಚನೆ ಮೂಲಕ ಮಾಹಿತಿ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 148 ಕೇಂದ್ರಗಳ ಮೂಲಕ 7,500 ಸದಸ್ಯರು ಸೇರಿ ಆತ್ಮ ವಿಶ್ವಾಸ ಪಡೆದು ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕನ್ನು ನಡೆಸಲು ಸಹಕಾರಿಯಾಗಿದೆ ಎಂದರು.

ಸಂವಾದದಲ್ಲಿ ಜಿಲ್ಲಾ ನಿರ್ದೇಶಕಿ ಎಂ.ಚೇತನಾ, ಯೋಜನಾಧಿಕಾರಿಗಳಾದ ಪಾಂಡ್ಯನ್, ರವಿ, ಯೋಗೀಶ್, ಸುವರ್ಣ ಭಟ್, ಮಮತಾಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net