ಬಿಜೆಪಿಯಿಂದ ಧರ್ಮ ಸ್ಥಳ ಚಲೋ

RAVI KALAPPA
Published on

ಮಡಿಕೇರಿ: ಕೊಡಗು ಬಿಜೆಪಿಯಿಂದ ಧರ್ಮ ಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿ ಕಾಳಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರವಾದ ಶ್ರೀ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇತ್ತೀಚಿನ ವರ್ಷಗಳಿಂದ ಸುಳ್ಳು ಕಥೆಗಳನ್ನು ಸೃಷ್ಟಿಸಿ ದೇವಾಲಯ ಮತ್ತು ಆಡಳಿತ ಮಂಡಳಿಗಳ ಮುಖ್ಯಸ್ಥರುಗಳ ವಿರುದ್ಧ ಹೇಳಿಕೆಗಳನ್ನು ನೀಡಲಾಗುತ್ತಿದೆ. ಯೂಟ್ಯೂಬ್ ಚ್ಯಾನಲ್‌ಗಳನ್ನು ಬಳಸಿಕೊಂಡು ಪವಿತ್ರ ಕ್ಷೇತ್ರದ ಹೆಸರನ್ನು ಹಾಳು ಮಾಡಿ ಹಿಂದೂಗಳ ದೇವರನ್ನು ಅವಹೇಳನ ಮಾಡುತ್ತಿದ್ದಾರೆ. ಇದರ ಹಿಂದಿರುವವರ ಕೈಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ರಾಜ್ಯ ಬಿಜೆಪಿ ಕರೆ ನೀಡಿರುವ ಹಿನ್ನಲೆಯಲ್ಲಿ ಕೊಡಗು ಬಿಜೆಪಿಯಿಂದ ಸಾವಿರಾರು ಸಂಖ್ಯೆಯಲ್ಲಿ ಸೋಮವಾರ ಧರ್ಮಸ್ಥಳ ದತ್ತ ತೆರಳಲು ಪಕ್ಷ ಪೂರ್ವ ತಯಾರಿಯಲ್ಲಿ ತೊಡಗಿದೆ ಎಂದು ತಿಳಿಸಿದ್ದಾರೆ.

ಮಡಿಕೇರಿ ನಗರ, ಗ್ರಾಮಾಂತರ, ಮಂಡಲಗಳಲ್ಲಿ ಈಗಾಗಲೇ ಪೂರ್ವ ತಯಾರಿ ಸಭೆಗಳಾಗಿದೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಅಲ್ಲದೆ ಶ್ರೀ ಧರ್ಮಸ್ಥಳ ಕ್ಷೇತ್ರದ ಭಕ್ತರು ಕೂಡ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಸೆ.೧ರ ಸೋಮವಾರ ಬೆಳ್ಳಿಗೆ ೮ ಗಂಟೆಗೆ ಕೊಡಗಿನ ಕಾರ್ಯಕರ್ತರು ಮತ್ತು ಭಕ್ತರು ಕೊಯಿನಾಡಿನ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಸೇರಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಅಂದು ಮಧ್ಯಾಹ್ನ ೨ ಗಂಟೆಗೆ ಸಾರ್ವಜನಿಕ ಪ್ರತಿಭಟನ ಸಭೆ ನಡೆಯಲಿದೆ. ಈ ಪ್ರತಿಭಟನೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಂದಾಜು ೧ ಲಕ್ಷಕ್ಕೂ ಮೇಲ್ಪಟ್ಟು ಕಾರ್ಯಕರ್ತರು ಮತ್ತು ಭಕ್ತವೃಂದ ಭಾಗವಹಿಸಲ್ಲಿದ್ದು, ಕೊಡಗಿನಿಂದ ಸುಮಾರು ೪೦೦ ರಿಂದ ೫೦೦ ವಾಹನಗಳಲ್ಲಿ ಸುಮಾರು ೨೦೦೦ಕ್ಕೂ ಮೇಲ್ಪಟ್ಟು ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net