ಶಾಸಕ ಎಸ್.ಆರ್.ವಿಶ್ವನಾಥ ನೇತೃತ್ವದಲ್ಲಿ 500 ಕಾರುಗಳಲ್ಲಿ ಧರ್ಮಸ್ಥಳ ಚಲೋ ಅಭಿಯಾನ

dharma
Published on

ಯಲಹಂಕ : ಧರ್ಮಸ್ಥಳದ ವಿರುದ್ಧ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ನಿರಂತರ ಅಪಪ್ರಚಾರಕ್ಕೆ ಸಿಡಿದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಧರ್ಮಸ್ಥಳ ಚಲೋ ಅಭಿಯಾನ ಹಮ್ಮಿಕೊಂಡಿದ್ದು, ಸ್ವಗ್ರಾಮ ಸಿಂಗನಾಯಕನಹಳ್ಳಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.

ಸಿಂಗನಾಯಕನಹಳ್ಳಿಯಿಂದ ಹೊರಟು ನೆಲಮಂಗಲ ಮಾರ್ಗವಾಗಿ ಸುಮಾರು 500 ಕಾರುಗಳಲ್ಲಿ ಸಾವಿರಾರು ಮುಖಂಡರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಿದರು.

ಈ ವೇಳೆ ಮಾತನಾಡಿದ ವಿಶ್ವನಾಥ್, ‘ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂಬ ಸಂಕಲ್ಪ’ ದೊಂದಿಗೆ ಧರ್ಮಸ್ಥಳ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸುಮಾರು 500 ಕಾರುಗಳಲ್ಲಿ ಸಾವಿರಾರು ಮುಖಂಡರು ತೆರಳುತ್ತಿದ್ದೇವೆ. ತನಿಖೆಯ ನೆಪದಲ್ಲಿ ನಮ್ಮ ಧರ್ಮ, ದೇವಾಲಯಗಳು, ಶ್ರದ್ಧಾ ಕೇಂದ್ರಗಳ ವಿರುದ್ಧ ನಡೆಸುವ ಅಪಪ್ರಚಾರವನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ನಮ್ಮ ಧರ್ಮ ಮತ್ತು ದೇವರಿಗೆ ಚ್ಯುತಿ ತರುವಂತಹ ಘಟನಾವಳಿಗಳು ಎಲ್ಲಿಯೇ ನಡೆದರೂ ಸಹ ಅದರ ವಿರುದ್ಧ ಪ್ರತಿಭಟಿಸಿ, ನೈತಿಕ ಶಕ್ತಿ ತುಂಬುವುದು ನಮ್ಮ ಕರ್ತವ್ಯ. ಧರ್ಮಸ್ಥಳದ ವಿರುದ್ಧ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸುವ ಸಲುವಾಗಿ ಇಂದು ಧರ್ಮಸ್ಥಳ ಚಲೋ ಅಭಿಯಾನ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನ ರಾಜ್ಯ ವ್ಯಾಪಿಯಾಗಿ ನಡೆಯಲಿದೆ. ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ಮುಖಂಡರು ಧರ್ಮಸ್ಥಳಕ್ಕೆ ಆಗಮಿಸಲಿದ್ದು, ಅವರೊಂದಿಗೂ ಸಹ ಭೇಟಿ ನೀಡಿ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಲಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಎಂ.ಜಿ.ರಾಮಮೂರ್ತಿ, ಸತೀಶ್ ಕಡತನಮಲೆ, ವಿಶ್ವನಾಥಪುರ ಮಂಜುನಾಥ್, ಮುರಾರಿರಾಮು, ಈಶ್ವರ್, ವಿ.ಪವನ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net