

ಹುಬ್ಬಳ್ಳಿ : ಧರ್ಮಸ್ಥಳ ಪ್ರಕರಣದ ಹಿಂದೆ ಹಿಂದು ಧಾರ್ವಿುಕ ವಿರೋಧಿ ಶಕ್ತಿಗಳು ಕೆಲಸ ಮಾಡುತ್ತಿದ್ದು, ಈ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಕೂಲಂಕುಷ ತನಿಖೆ ನಡೆಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದ ಹಿಂದೆ ಸರ್ಕಾರದಲ್ಲಿರುವ ಎಡಪಂಥಿಯ ವ್ಯಕ್ತಿಗಳ ಕೈವಾಡ ಇದೆ. ಅವರು ಯಾರು ಎಂಬುದು ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ ಎಂದರು.
ಈ ಪ್ರಕರಣವನ್ನು ಯೋಜನಾ ಬದ್ಧವಾಗಿ ರೂಪಿಸಲಾಗಿದೆ. ಮುಸುಕುಧಾರಿ ಹಿಂದೆ ಕಾಣದ ಶಕ್ತಿಗಳು ಕೆಲಸ ಮಾಡಿವೆ. ಧಾರ್ವಿುಕ ವಿರೋಧಿ ಟೂಲ್ ಕಿಟ್ ಬಳಸಿ ಹಿಂದುಗಳ ಶ್ರದ್ಧಾ ಕೇಂದ್ರಗಳ ಮೇಲೆ ಜನರ ನಂಬಿಕೆ, ವಿಚಾರಧಾರೆಗಳಿಗೆ ಧಕ್ಕೆ ತರಲು ದೊಡ್ಡ ಷಡ್ಯಂತ್ರ ನಡೆದಿದೆ ಎಂದು ದೂರಿದರು.
ಯೂಟ್ಯೂಬ್ ವರದಿ ಆಧರಿಸಿ ಎಸ್ಐಟಿ ತನಿಖೆ ನಡೆಸಿರುವುದು ಸರ್ಕಾರದ ಬುದ್ಧಿಹೀನತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿಂದೆ ಶನಿಸಿಂಗ್ಣಾಪುರ, ಇಶಾ ಫೌಂಡೇಷನ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ಹೀಗೆ ನಾನಾ ರೀತಿಯ ಹಿಂದು ಧಾರ್ವಿುಕ ಶ್ರದ್ಧಾ ಕೇಂದ್ರಗಳ ಮೇಲೆ ಇದೇ ರೀತಿಯ ದಾಳಿ ನಡೆಸಿರುವುದು ಸ್ಪಷ್ಟವಾಗಿದೆ ಎಂದರು.
ಗೊಂದಲದಲ್ಲಿ ಡಿಕೆಶಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಗೊಂದಲದಲ್ಲಿರುವ ಕಾರಣ ವಿಧಾನಸಭೆ ಅಧಿವೇಶನದಲ್ಲಿ ಆರ್ಎಸ್ಎಸ್ ಪ್ರಾರ್ಥನೆ ಹಾಡಿದ್ದಾರೆ. ಹೀಗಾಗಿ, ಕಾಂಗ್ರೆಸ್ ಮುಖಂಡರು ಡಿಸಿಎಂ ಡಿ.ಕೆ. ಶಿವಕುಮಾರ ವಿರುದ್ಧ ಮುಗಿಬಿದ್ದಿದ್ದಾರೆ. ಅವರ ಮೇಲೆ ಬಿಜೆಪಿಗೆ ಯಾವುದೇ ಮೃದು ಧೋರಣೆ ಹೊಂದಿಲ್ಲ. ಭಯೋತ್ಪಾದಕರನ್ನು ಬ್ರದರ್ಯುಂದು ಸಂಭೋದಿಸುವವರ ಬಗ್ಗೆ ಬಿಜೆಪಿ ಮೃದು ಧೋರಣೆ ಹೊಂದಲು ಹೇಗೆ ಸಾಧ್ಯ ? ಎಂದರು.
ಇತ್ತೀಚೆಗೆ ನಡೆದ ಲೋಕಸಭಾ ಹಾಗೂ ರಾಜ್ಯಸಭಾ ಅಧಿವೇಶಗಳಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಸಕಾರಣವಿಲ್ಲದೆ ಎರಡ್ಮೂರು ದಿನ ಅಧಿವೇಶನ ನಡೆಯಲು ಬಿಡಲಿಲ್ಲ. ಮಹತ್ವದ ಬಿಲ್ಗಳಿಗೆ ವಿರೋಧ ಮಾಡಿದರು. ಚರ್ಚೆಗೆ ಅವಕಾಶ ನೀಡಿದರೂ ಸಹ ಚರ್ಚೆ ಮಾಡಲಿಲ್ಲ. ಆಪರೇಷನ್ ಸಿಂದೂರ ಬಗ್ಗೆ ಚರ್ಚೆ ಮಾಡಬೇಕೆಂದು ವಿಪಕ್ಷಗಳು ಒತ್ತಾಯಿಸಿದವು. ಅದಕ್ಕೂ ಅವಕಾಶ ಕೊಡಲಾಯಿತು. ನಂತರ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಪೆಹಲ್ಗಾಮ್ ವಿಷಯ ಪ್ರಸ್ತಾಪಿಸಿದರು. ಅದಕ್ಕೂ ಅವಕಾಶ ಕೊಟ್ಟರೂ ಚರ್ಚೆಗೆ ಬರಲಿಲ್ಲ ಎಂದರು.
ತಮ್ಮ ಮೂಗಿನ ನೇರಕ್ಕೆ ದೇಶದಲ್ಲಿ ಆಡಳಿತ ನಡೆಯಬೇಕೆಂಬ ಮನೋಭಾವನೆಯಲ್ಲಿ ಕಾಂಗ್ರೆಸ್ ಇದೆ. ಈ ಪಕ್ಷ ಇದೇ ರೀತಿಯ ವರ್ತನೆ ಮುಂದುವರೆಸಿದರೆ ಇನ್ನೂ ಕೆಲವೇ ವರ್ಷಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ನ್ಯಾಷನಲ್ ಸ್ಪೋರ್ಟ್ಸ್ ಬಿಲ್, ಇನ್ಕಮ್ ಟ್ಯಾಕ್ಸ್ ಬಿಲ್ ಇನ್ನಿತರ ಮಹತ್ವದ ಬಿಲ್ಗಳನ್ನು ಸದನದಲ್ಲಿ ಪಾಸ್ ಮಾಡಲಾಯಿತು ಎಂದು ತಿಳಿಸಿದರು.
ವಿವಾದ ಮಾಡಲು ಆಸಕ್ತಿ ಇಲ್ಲ : ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ ಅವರನ್ನು ರಾಜ್ಯ ಸರ್ಕಾರ ಆಹ್ವಾನಿಸಿರುವ ಬಗ್ಗೆ ದೊಡ್ಡ ವಿವಾದ ಮಾಡಲು ನನಗೆ ಆಸಕ್ತಿ ಇಲ್ಲ. ರಾಜ್ಯದ ಜನತೆ ಒಪ್ಪಿರುವ ನಾಡದೇವತೆ , ಭುವನೇಶ್ವರಿಯನ್ನು ಅವರು ಒಪ್ಪಿಲ್ಲ. ಹೀಗಾಗಿ ಈ ವಿಷಯ ವಿವಾದವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹಿಂದು ಸಂಸ್ಕೃತಿ ಬಹಳ ವಿಶಾಲವಾಗಿದೆ. ಬಾನು ಮುಷ್ತಾಕ ಅವರು ಎಲ್ಲ ಧಾರ್ವಿುಕ ಆಚರಣೆಗಳನ್ನು ಒಪ್ಪಿಕೊಂಡಲ್ಲಿ ದಸರಾ ಉದ್ಘಾಟನೆಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಅವರು ಬರುತ್ತಾರೆ ಎನ್ನುವ ಕಾರಣಕ್ಕೆ ಧಾರ್ವಿುಕ ಆಚರಣೆ, ಪರಂಪರೆಯನ್ನು ಸರ್ಕಾರ ಬದಲಾಯಿಸಲು ಮುಂದಾದರೆ ನಾವು ಅದನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಮುಖಂಡ ಮಹೇಂದ್ರ ಕೌತಾಳ ಸುದ್ದಿಗೋಷ್ಠಿಯಲ್ಲಿ ಇದ್ದರು.