

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಕಿದ ಆನೆ ಲಕ್ಷ್ಮಿ ಮೊದಲ ಬಾರಿಗೆ ಮರಿಗೆ ಜನ್ಮ ನೀಡಿದೆ. ಶಿವನ ಆಶ್ರಯದಲ್ಲಿ ಬೆಳೆಯುವುದರಿಂದ ಈ ಲಕ್ಷ್ಮಿಯ ಮಗಳಿಗೆ ಶಿವಾನಿ ಎಂದು ನಾಮಕರಣ ಮಾಡಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದಲ್ಲಿ ಸೋಮವಾರ ಕ್ಷೇತ್ರ ವತಿಯಿಂದ ಸಂಪ್ರದಾಯ ಪ್ರಕಾರ ಆನೆ ಮರಿಗೆ ನಾಮಕರಣ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎರಡು ವರ್ಷಗಳ ಹಿಂದೆ ಆನೆ ಲಕ್ಷ್ಮಿಯನ್ನು ಬನ್ನೇರುಘಟ್ಟ ಕಾಡಿಗೆ ಕಳುಹಿಸಿ ಗರ್ಭಧಾರಣೆ ಮಾಡಿಸಲಾಗಿತ್ತು. ಪ್ರಾಣಿಸಂಕುಲದಲ್ಲಿ ಹೆಚ್ಚು ಸಮಯ ಗರ್ಭ ಧರಿಸುವ ಪ್ರಾಣಿ ಆನೆ. ಲಕ್ಷ್ಮಿಎರಡು ವರ್ಷ ಎರಡು ತಿಂಗಳ ಬಳಿಕ ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ. ಸರ್ಕಾರಿ ವೈದ್ಯರಿಂದ ಕಾಲಕ್ಕನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ವನ ಸಂಚಾರ ಅಭ್ಯಾಸ ಬೆಳೆಸಲಾಗುತ್ತಿದೆ ಎಂದರು.
ಸಂಪ್ರದಾಯದ ಪ್ರಕಾರ ಆನೆಗಳಿಗೆ ಆಹಾರ ತಿನ್ನಿಸುವ ಕಾರ್ಯ ಮತ್ತು ಮರಿಗೆ ಅಲಂಕಾರ ಮಾಡಿ, ನೀರಾಟ ಮಾಡಿಸಲಾಯಿತು. ಬಲೂನು ಕಟ್ಟುವ ಮೂಲಕ ಸಂಭ್ರಮಿಸಿ, ಕೇಕ್ ಕತ್ತರಿಸಲಾಯಿತು. ಬಳಿಕ ಡಾ.ಹೆಗ್ಗಡೆಯವರು ಮರಿ ಆನೆಗೆ ದೇವರ ಪ್ರಸಾದ ಹಾಕಿ ಘಂಟೆ ಕಟ್ಟುವ ಮೂಲಕ ನಾಮಕರಣ ಕಾರ್ಯ ನೆರವೇರಿಸಿದರು. ಹೆಗ್ಗಡೆಯವರ ಮೊಮ್ಮಗಳು ಕುಮಾರಿ ಮಾನ್ಯ ಶಿವಾನಿ ಎಂಬ ಹೆಸರನ್ನು ಘೋಷಿಸಿದರು. ಮಾವುತ ಕೃಷ್ಣನನ್ನು ಡಾ.ಹೆಗ್ಗಡೆ ಸನ್ಮಾನಿಸಿದರು.
ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅಮೀತ್, ಶ್ರದ್ಧಾ ಅಮೀತ್, ಡಾ.ಬಿ.ಯ ಶೋವರ್ಮ, ಸೋನಿಯಾ ವರ್ಮ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ವಿ.ಶೆಟ್ಟಿ, ದೇವಳದ ಪಾರುಪತ್ತೆದಾರ ಪಿ.ಲಕ್ಷ್ಮೀ ನಾರಾಯಣ ರಾವ್, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಹೆಗ್ಗಡೆ ಕುಟುಂಬಸ್ಥರು ಭಾಗಿಯಾಗಿದ್ದರು.
ಆನೆಗಳಲ್ಲಿ ಮನುಷ್ಯರಿಗಿಂತಲೂ ಹೆಚ್ಚು ಒಡನಾಡಿಗಳನ್ನು ಪ್ರೀತಿಸುವ ಮನೋಭಾವವಿದೆ. ಅಜ್ಜಿ ಆನೆ ಲತಾ ಮೊಮ್ಮಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಹಾಲು ತಿನ್ನಲು ಮಾತ್ರ ಮರಿ ತಾಯಿಯ ಹತ್ತಿರ ಹೋಗುತ್ತದೆ. ಉಳಿದ ಸಮಯವನ್ನು ಅಜ್ಜಿಯೊಂದಿಗೇ ಕಳೆಯುತ್ತಾಳೆ.
-ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಶ್ರೀಕ್ಷೇತ್ರ ಧರ್ಮಸ್ಥಳ
ಮೊದಲ ಬಾರಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆನೆ ಮರಿ ಇಟ್ಟಿದ್ದು ಇದರ ನಾಮಕರಣ ನೋಡುವ ಭಾಗ್ಯ ನಮಗೆ ಸಿಕ್ಕಿದೆ. ಜತೆಗೆ ಶಿವಾನಿ ಎಂಬ ಹೆಸರಿಡುವ ಭಾಗ್ಯ ನನಗೆ ಬಂದಿದೆ.
-ಕುಮಾರಿ ಮಾನ್ಯ, ಡಾ.ಹೆಗ್ಗಡೆಯವರ ಮೊಮ್ಮಗಳು