ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಕಲಿಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಚೇತನಾ ಕಿವಿಮಾತು

Dharmasthal village development project sadhana meeting in Holalu village
Published on

ಮಂಡ್ಯ: ತಾಯಂದಿರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಮನೆಯಿಂದಲೇ ಕಲಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಚೇತನಾ ಸಲಹೆ ನೀಡಿದರು.

ತಾಲೂಕಿನ ಹೊಳಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಹೊಳಲು ಸ್ಥಳೀಯ ಸ್ವಸಹಾಯ ಸಂಘಗಳ ವತಿಯಿಂದ ಆಯೋಜಿಸಿದ್ದ ಸಾಧನ ಸಮಾವೇಶ ಹಾಗೂ ಜನಮಂಗಳ ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಸಾಲ ವಿತರಣಾ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸಿಕೊಂಡು ಮುನ್ನಡೆಯುವುದು ಅಗತ್ಯ. ಆಹಾರ ಪದ್ಧತಿಯನ್ನು ಬದಲಿಸದೆ ಉಳಿಸಿಕೊಳ್ಳಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಗೆ ಬಂದು 10 ವರ್ಷವಾಗಿದೆ. ದಶಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಏನೇನು ಸಾಧನೆ ಮಾಡಿದ್ದೀರಿ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿ ಮಾತನಾಡಿದ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಧರ್ಮಶಾಸ್ತ್ರ ಹೇಳುವಂತೆ ಮಾನವ ಜನ್ಮ ಶ್ರೇಷ್ಟವಾಗಿದೆ. ಈ ಜನ್ಮ ಬಂದಿರುವುದು ನಮ್ಮಗಳ ಪುಣ್ಯ. ಪ್ರತಿಯೊಬ್ಬರೂ ಒಳ್ಳೆಯ ಕೆಲಸಗಳನ್ನು ಸಮಾಜಕ್ಕೆ ನೀಡುವುದು ಅಗತ್ಯ ಎಂದು ಹೇಳಿದರು.

ಜನಮಂಗಳ ಸಲಕರಣೆ ವಿತರಿಸಿದ ಮಾಜಿ ಶಾಸಕ ಎಚ್.ಬಿ.ರಾಮು ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆ ಅವರು ಹಲವಾರು ಸಮಾಜಮುಖಿ ಕಾರ್ಯಕ್ರಮ ಮಾಡಿದ್ದಾರೆ. ಅವು ಜನಮಾನಸದಲ್ಲಿ ಉಳಿಯಬೇಕಾದರೆ ಸ್ತ್ರೀಶಕ್ತಿಯಿಂದ ಮಾತ್ರ ಸಾಧ್ಯ. ಇಂತಹ ಕಾರ್ಯಕ್ರಮಗಳಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ ಮಾತನಾಡಿ, ಸರ್ಕಾರಗಳು ಮಾಡದ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ. ಶಾಲಾ ಕಾಂಪೌಂಡ್, ರುದ್ರಭೂಮಿಗಳ ಅಭಿವೃದ್ಧಿ, ಡೇರಿ ಕಟ್ಟಡ, ವಿದ್ಯಾರ್ಥಿ ವೇತನ, ಅಂಗವಿಕಲರ ಸಲಕರಣೆಗಳು ಸೇರಿದಂತೆ ವಿವಿಧ ಸಮಾಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.

ವಕೀಲ ವಿಜಯಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಚ್.ಡಿ.ರವಿ, ಎಚ್.ಎಲ್.ಶಂಕರ್, ಸೊಸೈಟಿ ಅಧ್ಯಕ್ಷ ನಿಂಗೇಗೌಡ, ಡೇರಿ ಅಧ್ಯಕ್ಷ ಎಚ್.ಎನ್.ಉಮೇಶ್, ಗ್ರಾಮ ಲೆಕ್ಕಾಧಿಕಾರಿ ಗುಣಶೇಖರ್, ರೈತ ಸಂಘದ ಲತಾ ಶಂಕರ್, ಸ್ವಸಹಾಯ ಸಂಘಗಳ ಅಧ್ಯಕ್ಷೆ ಲಿಂಗರಾಜಮ್ಮ, ಸಾವಿತ್ರಮ್ಮ, ಯುವ ಮುಖಂಡರಾದ ಸಂತೋಷ್, ಚೇತನ್, ಶ್ಯಾಂ, ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಮೇಲ್ವಿಚಾರಕ ಶಿವಕುಮಾರ್ ಇತರರಿದ್ದರು.

ಇದೇ ವೇಳೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಲ ಪಡೆದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತೆಯೇ ಗ್ರಾಮಸ್ಥರಿಗೆ ಸಸಿಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net