ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಗ್ರಂಥಾಲಯ ಮಂಜೂಷಾ ಕಟ್ಟಡಕ್ಕೆ ಸ್ಥಳಾಂತರ

Manjoosha
Published on

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಗ್ರಂಥಾಲಯವನ್ನು ಮಂಜೂಷಾ ವಸ್ತು ಸಂಗ್ರಹಾಲಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಶ್ರುತ ಪಂಚಮಿ ದಿನವಾದ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ.ಹೆಗ್ಗಡೆ ಉದ್ಘಾಟಿಸಿದರು.

ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅಮಿತ್, ಶ್ರದ್ಧಾ ಅಮಿತ್, ಮಾನ್ಯ, ಡಾ.ಬಿ.ಯಶೋವರ್ಮ, ಸೋನಿಯಾ ವರ್ಮ, ಡಿ.ಶ್ರೇಯಸ್ ಕುಮಾರ್, ಡಿ.ನಿಶ್ಚಲ್ ಕುಮಾರ್, ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ, ಡಾ.ವಿಘ್ನರಾಜ ಎಸ್.ಆರ್. ಉಪಸ್ಥಿತರಿದ್ದರು.

ಅನೇಕ ಕೃತಿಗಳ ಭಂಡಾರ: ಗ್ರಂಥಾಲಯದಲ್ಲಿ 4,707 ತಾಡೋಲೆ ಹಸ್ತಪ್ರತಿಗಳು, 1,468 ಕಾಗದ ಹಸ್ತಪ್ರತಿಗಳು, 302 ಕಲ್ಲಚ್ಚಿನ ಪ್ರತಿಗಳು ಹಾಗೂ 25,637 ಮುದ್ರಿತ ಪುಸ್ತಕಗಳ ಅಮೂಲ್ಯ ಸಂಗ್ರಹವಿದೆ. ಕನ್ನಡ, ಇಂಗ್ಲಿಷ್, ಸಂಸ್ಕೃತ, ತುಳು, ಮರಾಠಿ, ತೆಲುಗು, ಪ್ರಾಕೃತ ಹಾಗೂ ಪಾಲಿ ಭಾಷೆಯಲ್ಲಿ ರಚಿಸಿದ ಅನೇಕ ಕೃತಿಗಳಿವೆ.

ವಿವಿಧ ವಿವಿಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಇಲ್ಲಿಗೆ ಬಂದು ತಮ್ಮ ಅಧ್ಯಯನ ಮತ್ತು ಸಂಶೋಧನೆಗೆ ಗ್ರಂಥಾಲಯವನ್ನು ಬಳಸುತ್ತಾರೆ. ಇತಿಹಾಸ ತಜ್ಞ ಮಂಡ್ಯದ ಪ್ರೊ.ಎಚ್.ವಿ.ನರಸಿಂಹಮೂರ್ತಿ ಇತಿಹಾಸ ಮತ್ತು ಸಂಶೋಧನೆಗೆ ಸಂಬಂಧಿಸಿದ ಒಂದು ಸಾವಿರ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಮೈಸೂರಿನ ಸಮುದಾಯ ಅಧ್ಯಯನ ಕೇಂದ್ರದ ಪ್ರಣತಾ ಅವರು 29 ಅಮೂಲ್ಯ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net