ಧರ್ಮಸ್ಥಳದಿಂದ ಹಸಿರು ಕ್ರಾಂತಿ, ಉಡುಪಿ, ದ.ಕ ಜಿಲ್ಲೆಯ 473 ಕುಟುಂಬಗಳಿಂದ 1391 ಎಕರೆ ಹಡಿಲು ಭೂಮಿಯಲ್ಲಿ ಕೃಷಿ

hadilu new
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಆಧುನಿಕತೆ, ಪಟ್ಟಣದತ್ತ ವಲಸೆ, ಕಾರ್ಮಿಕರ ಕೊರತೆ, ಹೆಚ್ಚಿದ ಕೃಷಿ ಖರ್ಚು, ಕಾಡು ಪ್ರಾಣಿಗಳ ಹಾವಳಿಗೆ ಬೇಸತ್ತು ಕೃಷಿಯಿಂದ ವಿಮುಖರಾಗುತ್ತಿದ್ದವರ ಸಂಖ್ಯೆ ತಗ್ಗಿ, ಕೃಷಿಕರ ಅಂಕಿ-ಅಂಶ ನಿಧಾನವಾಗಿ ಏರಿಕೆಯಾಗುತ್ತಿದೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರ ಪ್ರಯತ್ನ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 1391 ಎಕರೆ ಹಡಿಲು ಭೂಮಿಯಲ್ಲಿ 473 ಕುಟುಂಬ ಭತ್ತ, ತರಕಾರಿ, ಬಾಳೆ ಕೃಷಿ ಮೂಲಕ ಹಸಿರು ಕಂಗೊಳಿಸುವಂತೆ ಮಾಡಿದೆ.
ಆಹಾರ ಭದ್ರತೆಯಲ್ಲಿ ಬಹುಪಾಲು ಕೊಡುಗೆ ನೀಡುತ್ತಿದ್ದ ಭತ್ತದ ಕೃಷಿ ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮರೆಯಾಗುತ್ತಿದೆ. ಕೃಷಿ ಭೂಮಿಗಳು ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್ ಆಗುತ್ತಿರುವ ಕಾಲಘಟ್ಟ, ವಾಣಿಜ್ಯ ಬೆಳೆ ಪ್ರಭಾವ ಹಾಗೂ ಕೀಟರೋಗ ಬಾಧೆಯಿಂದ ಭತ್ತದ ಕೃಷಿಯಿಂದ ರೈತರು ನಿರೀಕ್ಷೆ ಪಡುವ ಪ್ರಮಾಣದಲ್ಲಿ ಆದಾಯ ಪಡೆಯಲು ಸಾಧ್ಯವಾಗದೆ ಬಹುತೇಕ ರೈತರು ಭತ್ತ ಕಡೆಗಣಿಸಿ ಹಡಿಲು ಬಿಡುತ್ತಿದ್ದಾರೆ, ಇತರ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎನ್ನುವುದು ಗ್ರಾಮಾಭಿವೃದ್ಧಿ ಯೋಜನೆ ಕಂಡುಕೊಂಡ ವಾಸ್ತವ ಸಂಗತಿ.

ಕೃಷಿ ಕೂಲಿಯಾಳುಗಳ ಸಮಸ್ಯೆ, ಕೃಷಿಕರ ಮಕ್ಕಳು ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ವಲಸೆ, ಬೆಳೆದ ಉತ್ಪನ್ನಗಳಿಗೆ ಸೂಕ್ತ ದರ ಮತ್ತು ಮಾರುಕಟ್ಟೆ ಕೊರತೆ, ಸಕಾಲದಲ್ಲಿ ಯಂತ್ರೋಪಕರಣಗಳ ಅಲಭ್ಯತೆ ಭೂಮಿ ಹಡಿಲು ಬಿಡಲು ಪ್ರಮುಖ ಕಾರಣ. ಈ ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡು ರೈತರನ್ನು ಮತ್ತೆ ಭೂಮಿಗಿಳಿಸುವ ಪ್ರಯತ್ನ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ.

ನಿರಂತರ ಆದಾಯಕ್ಕೆ ಮಾರ್ಗದರ್ಶನ
ಬೇಸಾಯ ಖರ್ಚು ಕಡಿಮೆಗೊಳಿಸಿ ಅಧಿಕ ಇಳುವರಿ ಪಡೆಯಲು ಗ್ರಾಮಾಭಿವೃದ್ಧಿ ಯೋಜನೆ ಬೇಸಾಯ ಪದ್ಧತಿಯಲ್ಲಿ ಕೆಲವೊಂದು ಮಾರ್ಪಾಡು ಮಾಡಿದೆ. ಶ್ರೀ ಪದ್ಧತಿ, ಯಂತ್ರಶ್ರೀ, ಸಮಗ್ರ ಕೃಷಿ ಪದ್ಧತಿ, ಪರಿಸರ ಸ್ನೇಹಿ ಕೃಷಿ ಮೂಲಕ ರೈತರಿಗೆ ಸಹಕಾರ ನೀಡಿ ನಿರಂತರ ಆದಾಯ ಪಡೆಯಲು ಮಾರ್ಗದರ್ಶನ ನೀಡುತ್ತಿದ್ದು, ಯುವಜನತೆ ಕೃಷಿಯತ್ತ ವಾಲುವಂತೆ ಮಾಡಿದೆ. ಉಡುಪಿಯಲ್ಲಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ನಡೆಯುತ್ತಿರುವ ಹಡಿಲು ಭೂಮಿ ಕೃಷಿಗೆ ಪ್ರೇರಣೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದರೆ ತಪ್ಪಲ್ಲ.

ಹಡೀಲು ಭೂಮಿ ಕೃಷಿ ಕೈಗೊಂಡಿರುವ ವಿವರ:
ಊರು              ಕುಟುಂಬ            ವಿಸ್ತೀರ್ಣ (ಎಕರೆ)
ಕಾರ್ಕಳ              67                 201
ಮೂಡುಬಿದಿರೆ         78                183
ಉಡುಪಿ              80                 285
ಬ್ರಹ್ಮಾವರ           55                 174
ಕುಂದಾಪುರ          89                 265
ಬೈಂದೂರು          40                 154
*ಉಡುಪಿ ಜಿಲ್ಲೆ      409               1262*

ಬಂಟ್ವಾಳ           15                   60
ಗುರುವಾಯನಕೆರೆ    9                   14
ಬೆಳ್ತಂಗಡಿ            5                    7
ಬಜ್ಪೆ                35                  48
*ದಕ್ಷಿಣ ಕನ್ನಡ ಜಿಲ್ಲೆ 64                  129*

ಪ್ರಗತಿ ಬಂಧು ತಂಡದ ಸದಸ್ಯರು ತಮ್ಮ ವ್ಯಾಪ್ತಿಯ ಹಡಿಲು ಭೂಮಿ ಗುರುತಿಸಿ ಅದರ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಒಪ್ಪಂದ ಮಾಡಿಕೊಂಡು 2ರಿಂದ 5 ವರ್ಷದವರೆಗೆ ಕೃಷಿಗೆ ಸಿದ್ಧತೆ ನಡೆಸುತ್ತಾರೆ. ಭೂಮಾಲೀಕರು ಮತ್ತು ಗೇಣಿದಾರರ ನಡುವಿನ ಒಪ್ಪಂದದಂತೆ ಅಲ್ಪಾವಧಿ ಕೃಷಿ (ಭತ್ತ, ತರಕಾರಿ, ಬಾಳೆ... ಇತ್ಯಾದಿ) ಮೂಲಕ ಹಡಿಲು ಭೂಮಿ ಅಭಿವೃದ್ಧಿ ಮಾಡಲಾಗಿದೆ. ಕೃಷಿಕರ ಪ್ರಗತಿಬಂಧು ಸಂಘ ರಚನೆ, ಸರ್ಕಾರಿ ಇಲಾಖೆಗಳ ಸೌಲಭ್ಯ ಕುರಿತು ತರಬೇತಿ, ಪ್ರಾತ್ಯಕ್ಷಿಕೆ, ಹಡಿಲು ಭೂಮಿ ಅಭಿವೃದ್ಧಿ ಕ್ಷೇತ್ರ ಉತ್ಸವ, ಆರ್ಥಿಕ ಸಹಕಾರ, ರೈತರ ಒಕ್ಕೂಟ ರಚನೆ ಹೀಗೆ ಹಡಿಲು ಭೂಮಿ ಕೃಷಿಗೆ ಗ್ರಾಮಾಭಿವೃದ್ಧಿ ಯೋಜನೆ ಪ್ರಯತ್ನಿಸುತ್ತಿದೆ.
ಗಣೇಶ್ ಬಿ, ಜಿಲ್ಲಾ ಹಿರಿಯ ನಿರ್ದೇಶಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net