

ಕುಶಾಲನಗರ:
ಸುಮಾರು 800 ವರ್ಷಗಳ ಇತಿಹಾಸ ಇರುವ, ದಕ್ಷಿಣ ಕಾಶಿ ಎಂದೇ ಭಕ್ತರ ನಂಬಿಕೆಗೆ ಪಾತ್ರವಾಗಿರುವ ಪುಣ್ಯಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ತರುವ ಪ್ರಯತ್ನ ಖಂಡನೀಯ ಎಂದು ಶನಿವಾರಸಂತೆ ಬಳಿಯ ಮುಳ್ಳೂರು ಮಠದ ಶ್ರೀ ಬಸವಲಿಂಗ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ, ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಕುಶಾಲನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಧಾರ್ಮಿಕ ಕೇಂದ್ರಗಳಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯವೂ ಒಂದು. ಈ ದೇವಾಲಯಕ್ಕೆ ಸರಿ ಸುಮಾರು 800 ವರ್ಷಗಳ ಇತಿಹಾಸ ಇದೆ. ದಕ್ಷಿಣ ಕಾಶೀ ಎಂದೇ ಕರೆಯುವ ಈ ಪುಣ್ಯಕ್ಷೇತ್ರಕ್ಕೆ ಕರ್ನಾಟಕ, ತಮಿಳುನಾಡು, ಕೇರಳ, ಆಂದ್ರಪ್ರದೇಶ ಹಾಗೂ ಇತರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ರೀತಿಯ ಧಾರ್ಮಿಕ ನಂಬಿಕೆಯುಳ್ಳ ಪುಣ್ಯಕ್ಷೇತ್ರದ ಮೇಲೆ ಹಾಗೂ ಇಲ್ಲಿಯ ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ತರುವಂಥ ಕೀಳುಮಟ್ಟದ ಭಾಷೆಗಳಲ್ಲಿ ವಿಡಿಯೋ ತುಣುಕುಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ ಕ್ರಮ ಖಂಡನೀಯ.
ಅನಾದಿ ಕಾಲದಿಂದಲೂ ಹಿಂದೂ ಧಾರ್ಮಿಕ ಕೇಂದ್ರ, ಮಠಮಾನ್ಯಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಈ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪಿತೂರಿ ನಡೆಯುತ್ತಿದೆ. ಹಿಂದಿನಿAದಲೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೆ ಅಪಪ್ರಚಾರ ಮಾಡಿದರೂ ಭಕ್ತರಿಗೆ ಕ್ಷೇತ್ರದ ಬಗ್ಗೆ ಶ್ರದ್ಧೆ ಕಡಿಮೆಯಾಗುವುದಿಲ್ಲ ಎಂಬುದು ತಿಳಿಯಬೇಕು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಸಲ್ಲಿಸುತ್ತಿರುವುದು ಧರ್ಮಸ್ಥಳ ಮಾತ್ರ. ಇದರಿಂದ ಸಮಾಜ ಹಾಗೂ ಭಕ್ತರು ಅಭಿವೃದ್ಧಿ ಹೊಂದಿದ್ದಾರೆ. ಸ್ವಾಭಿಮಾನದಿಂದ ಬದುಕಲು ಧರ್ಮಸ್ಥಳ ಕಲಿಸಿದೆ. ಅವರ ಋಣದಲ್ಲಿ ನಾವು ಬದುಕುತ್ತಿದ್ದೇವೆ. ಆದರೆ ಧರ್ಮದ್ರೋಹಿಗಳ ಜತೆಗೆ ನಮ್ಮವರು ಸೇರಿಕೊಂಡಿರುವುದು ತುಂಬ ಬೇಸರವಾಗಿದೆ ಎಂದು ಹೇಳಿದರು.
ಕೊಡಗು ಜನಜಾಗೃತಿ ವೇದಿಕೆ ಸದಸ್ಯ ನಿಸರ್ಗ ಸ್ವಾಮಿ ಮಾತನಾಡಿ ಶಾಲೆಗಳು, ದೇವಾಲಯಗಳು, ಕೆರೆಗಳ ಅಭಿವೃದ್ಧಿಗೆ ಒತ್ತು ನೀಡುತ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೂಲಕ ಕೋಟ್ಯಂತರÀ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ಕಾರಣರಾಗಿದ್ದಾರೆ ಎಂದು ಅಂಕಿಅAಶಗಳ ಮೂಲಕ ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪುಂಡರೀಕಾಕ್ಷ ಮಾತನಾಡಿ ಧರ್ಮಸ್ಥಳ ಹಾಗೂ ಹೆಗ್ಗಡೆ ಅವರ ಬಗ್ಗೆ ಅನ್ಯಧರ್ಮೀಯ ಕೆಲವು ಪುಂಡರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದನ್ನು ಖಂಡನೀಯ. ಧಾರ್ಮಿಕ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎ.ಟಿ. ರಂಗಸ್ವಾಮಿ, ವೇದಿಕೆ ಸದಸ್ಯರಾದ ಎ.ಎಸ್. ಚಂದ್ರಶೇಖರ್ ಆವರ್ತಿ, ಎಚ್.ಎಂ. ಚAದ್ರು, ಎಸ್.ಕೆ. ಸತೀಶ್, ಕೆ.ಎಸ್.ರಾಜಶೇಖರ್, ಎಂ.ಎನ್ ಚಂದ್ರಮೋಹನ್, ಬೈಲುಕುಪ್ಪೆ ಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರಾದ ಬಿ.ಆರ್.ನಾಗೇಂದ್ರ ಪ್ರಸಾದ್, ಆವೃತ್ತಿ ಮಹಾದೇವಪ್ಪ, ಮನುನಂಜುAಡ, ಬೋಸ್ ಮೊಣ್ಣಪ್ಪ, ಎಂ.ಎA. ಚರಣ್, ಎಚ್.ಎಂ. ಮಧುಸೂದನ್,ಎಂ.ಎಸ್. ಶಿವಾನಂದ, ಅಮೃತ್ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.