ಧರ್ಮಪುರಕ್ಕಿಲ್ಲ ತಾಲೂಕು ಭಾಗ್ಯ?

HYR Dharmapura 30
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಧರ್ಮಪುರ ಹೋಬಳಿಯನ್ನು ತಾಲೂಕನ್ನಾಗಿ ಮಾಡಬೇಕೆಂಬ ದಶಕದ ಬೇಡಿಕೆ ಇನ್ನೂ ನನಸಾಗುವ ಕಾಲ ಕೂಡಿಬಂದಿಲ್ಲ.

ಆಂಧ್ರದ ಗಡಿ ಭಾಗದಲ್ಲಿರುವ ಧರ್ಮಪುರ ಜಿಲ್ಲೆಯ 2ನೇ ಅತಿ ದೊಡ್ಡ ಹೋಬಳಿ ಕೇಂದ್ರ. ತಾಲೂಕು ಕೇಂದ್ರದ ಬೇಡಿಕೆಗೆ ದಶಕಗಳ ಇತಿಹಾಸವಿದೆ. ತಾಲೂಕನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈವರೆಗೆ ಈಡೇರಿಲ್ಲ. ಪಕ್ಕದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪರಶುರಾಮಪುರ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಅಲ್ಲಿನ ಶಾಸಕ ಟಿ.ರಘುಮೂರ್ತಿ ಪಣ ತೊಟ್ಟಿದ್ದು, ವಿಧಾನಸಭೆ ಅಧಿವೇಶನದಲ್ಲಿ ಧ್ವನಿಯೆತ್ತಿದ್ದಾರೆ. ಆದರೆ, ಇತ್ತ ಧರ್ಮಪುರ ವಿಷಯದಲ್ಲಿ ಜನಪ್ರತಿನಿಧಿಗಳ ಮೌನ ಜನಾಕ್ರೋಶಕ್ಕೆ ಮುನ್ನುಡಿ ಬರೆಯುತ್ತಿದೆ.

ಧರ್ಮಪುರಕ್ಕೆ ತಾಲೂಕು ಕೇಂದ್ರದ ಅವಕಾಶ ಕೈ ತಪ್ಪುವ ಆತಂಕ ಎದುರಾಗಿದ್ದು, ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಇಚ್ಛಾಶಕ್ತಿಯಲ್ಲಿ ಅಡಗಿದೆ ಜನರ ಬೇಡಿಕೆ ಈಡೇರಿಕೆ ಭಾಗ್ಯ.

ವರದಿ: 1919 ಕಲ್ಕತ್ತಾ ಅಧ್ಯಯನ ಅಂಕಿ ಅಂಶ, 1963 ವಾಸುದೇವ ರಾವ್, 1986 ಹುಂಡೇಕರ್ ಸಮಿತಿ, 1988 ಗದ್ದಿಗೌಡರ ಆಯೋಗಗಳು ಧರ್ಮಪುರ ತಾಲೂಕು ಆಗುವ ಅರ್ಹತೆ ಹೊಂದಿದೆ ಎಂದು ವರದಿ ನೀಡಿವೆ. ಆದರೆ, ಎಲ್ಲ ಸರ್ಕಾರಗಳು ಈ ವಿಷಯದಲ್ಲಿ ನಿರ್ಲಕ್ಷೃ ವಹಿಸಿರುವುದು ದುರಂತ.

ಮಾತು ಉಳಿಸಿಕೊಳ್ಳಲಿ: 2018ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಧರ್ಮಪುರ ತಾಲೂಕು ಕೇಂದ್ರ ಮಾಡಲಾಗುವುದು ಎಂದು ಅಂದಿನ ಶಾಸಕ ಡಿ.ಸುಧಾಕರ್ ಮಾತು ಕೊಟ್ಟಿದ್ದರು. ಪ್ರಸ್ತುತ ಸರ್ಕಾರದಲ್ಲಿ ಜಿಲ್ಲಾ ಮಂತ್ರಿಯಾಗಿದ್ದು, ಜನರ ಬೇಡಿಕೆ ಹಾಗೂ ನುಡಿದಂತೆ ನಡೆಯಲು ಹಾದಿ ಸುಲಭವಾಗಿದೆ.

ಹಿರಿಯೂರು ತಾಲೂಕಿನಲ್ಲಿ ಬರ ಅಧ್ಯಯನಕ್ಕೆ ಬಂದಿದ್ದ ಅಂದಿನ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕೂಡ, ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿದರೆ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದರು.

ಹೋರಾಟದ ಇತಿಹಾಸ: ರೈತ ಸಂಘ ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ದಶಕದಿಂದ ಹೋರಾಟ ನಡೆಯುತ್ತಿದ್ದು, 2017-18ರಲ್ಲಿ ರೈತ ಸಂಘ 113 ದಿನಗಳ ಕಾಲ ಹೋರಾಟ ನಡೆಸಿತ್ತು.

ಪ್ರಗತಿ ಪಥದಲ್ಲಿ ಧರ್ಮಹೊಳಲು: ಕ್ರಿಶ 900 ರಿಂದ 1138 ರವರೆಗೆ ನೊಳಂಬರ ಆಳ್ವಿಕೆಗೆ ಒಳಪಟ್ಟಿದ್ದು, ಕ್ರಿಶ. 1076ರಲ್ಲಿ ನೊಳಂಬ ತ್ರಿಬುವನ ಮಲ್ಲಿದೇವನ ಆಡಳಿತದಲ್ಲಿ ಗತವೈಭವ ಇತ್ತು. ಗ್ರಾಮದಲ್ಲಿ ಪುರಾತನ ಕೆರೆ ಇದೆ. ದಶಕದಿಂದ ಈಚೆಗೆ ವೇಗವಾಗಿ ಬೆಳೆಯುತ್ತಿದೆ. ಸರ್ಕಾರಿ-ಖಾಸಗಿ ಶಿಕ್ಷಣ ಸಂಸ್ಥೆಗಳು, ಕಂದಾಯ ಇಲಾಖೆ, ಕೃಷಿ ಇಲಾಖೆ, ಗ್ರಾಪಂ. ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಉಪ ಠಾಣೆ, ಪ್ರವಾಸಿ ಮಂದಿರ, ಸಹಕಾರಿ ಸಂಘ, ರಾಷ್ಟ್ರೀಕೃತ ಬ್ಯಾಂಕ್, ಪೆಟ್ರೊಲ್ ಬಂಕ್, ಅಂಚೆ ಕಚೇರಿ, ವಿದ್ಯುತ್ ವಿತರಣಾ ಕೇಂದ್ರ, ಸೂಪರ್ ಮಾರ್ಕೆಟ್, ಸಾರಿಗೆ ಸಂಪರ್ಕ, ಧರ್ಮಪುರ ಫೀಡರ್ ನಾಲೆ ಕಾಮಗಾರಿ ಪ್ರಗತಿಯಲ್ಲಿದೆ. 42 ಕಂದಾಯ ಗ್ರಾಮ, 10 ಗ್ರಾಮ ಪಂಚಾಯಿತಿಗಳು, 75-80 ಸಾವಿರ ಜನಸಂಖ್ಯೆ ಹೊಂದಿದೆ. ಹೊಸಕೆರೆ ಗ್ರಾಮದ ಬಳಿ 220 ಕೆವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಯಾಗುತ್ತಿದೆ. ಅಗ್ನಿಶಾಮಕ ಠಾಣೆ ಸ್ಥಾಪಿಸಲು ಜಾಗ ಗುರುತಿಸಲಾಗಿದೆ. ಧರ್ಮಪುರ ಸಮೀಪ ಪೂನಾ-ಬೆಂಗಳೂರ ಗ್ರೀನ್ ಕಾರಿಡರ್ ರಾಷ್ಟ್ರೀಯ ಹೆದ್ದಾರಿ/ಸೂಪರ್ ಹೈವೆ ಹಾದು ಹೋಗಲಿದೆ. ದ್ದು, ತಾಲೂಕು ಕೇಂದ್ರದಿಂದ 38 ಕಿಮೀ ದೂರದಲ್ಲಿರುವ ಧರ್ಮಪುರದಲ್ಲಿ ಸಕಲ ಸೌಲಭ್ಯಗಳಿದ್ದು, ತಾಲೂಕು ಆಗುವ ಅರ್ಹತೆ ಹೊಂದಿದೆ.

ಹೋರಾಟಕ್ಕೆ ಬೆಂಬಲ: ಧರ್ಮಪುರ ತಾಲೂಕು ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ. ಅಗತ್ಯ ಸಹಕಾರ ನೀಡುತ್ತೇನೆ. ಈ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬದ್ಧತೆ ಪ್ರದರ್ಶಿಸಬೇಕು.- ಕೆ.ಪೂರ್ಣಿಮಾ, ಮಾಜಿ ಶಾಸಕಿ

ಮಾಡು ಇಲ್ಲವೆ ಮಡಿ: ಧರ್ಮಪುರವನ್ನು ತಾಲೂಕು ಮಾಡಲು ಎಲ್ಲ ಸಮತಿಗಳು ಶಿಫಾರಸು ಮಾಡಿದ್ದರು ಬೇಡಿಕೆ ಈಡೇರಿಲ್ಲ. ತಾಲೂಕು ಹೋರಾಟ ಸಮಿತಿ, ರೈತ ಸಂಘ, ವಿವಿಧ ಸ್ಥಳೀಯ ಸಂಘಟನೆಗಳ ಜತೆಗೂಡಿ ಮಾಡು ಇಲ್ಲವೆ ಮಡಿ ಹೋರಾಟ ಮಾಡಲಾಗುವುದು.- ಹಾರ್ಡ್‌ವೇರ್ ಶಿವಣ್ಣ, ರೈತ ಮುಖಂಡ

ಬದ್ಧತೆ ಪ್ರದರ್ಶಿಸಬೇಕು: ತಾಲೂಕು ರಚನಾ ಸಮಿತಿಗಳು ಧರ್ಮಪುರಕ್ಕೆ ಪೂರಕವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಡಿ.ಸುಧಾಕರ್ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ತಮ್ಮ ಬದ್ಧತೆ ಪ್ರದರ್ಶಿಸಬೇಕು.-ಬಿ.ಎಸ್.ರಘುನಾಥ್, ಮಾಜಿ ಅಧ್ಯಕ್ಷ, ಜಿಪಂ

ಹೋರಾಟಕ್ಕೆ ಚಾಲನೆ: ಧರ್ಮಪುರ ತಾಲೂಕು ಹೋರಾಟ ಸಮಿತಿ, ರೈತ ಸಂಘ, ಸ್ಥಳೀಯ ಸಂಘಟನೆಗಳನ್ನು ಪಕ್ಷಾತೀತವಾಗಿ ಒಗ್ಗೂಡಿಸಿ, ಮತ್ತೆ ಹೋರಾಟಕ್ಕೆ ಶೀಘ್ರ ಚಾಲನೆ ನೀಡಲಾಗುವುದು.- ಎಂ.ಶಿವಣ್ಣ ಶ್ರವಣಗೆರೆ, ಅಧ್ಯಕ್ಷ, ತಾಲೂಕು ಹೋರಾಟ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net