ಅನುಮಾನಾಸ್ಪದ ಓಡಾಡುತ್ತಿದ್ದ ಯುವಕನಿಗೆ ಧರ್ಮದೇಟು

theif arrest
ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಹಿಡಿದ ಸಾರ್ವಜನಿಕರು.
Published on

ಶಿವಮೊಗ್ಗ: ನಗರದ ವಿನಾಯಕ ಟಾಕೀಸ್ ಪಕ್ಕದ ಗುಜರಿ ಅಂಗಡಿಗಳ ಬಳಿ ಗುರುವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ಜತೆಗಿದ್ದ ಮತ್ತಿಬ್ಬರು ಪರಾರಿಯಾಗಿದ್ದು ಕಳ್ಳರಿರಬೇಕೆಂಬ ಶಂಕೆ ವ್ಯಕ್ತವಾಗಿದೆ.

ಬೊಮ್ಮನಕಟ್ಟೆಯ ಹರೀಶ್ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ದೇವಸ್ಥಾನದ ತುಂಡಾದ ಗಂಟೆಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಕೊಂಡು ಬರುತ್ತಿದ್ದಾಗ ಅನುಮಾನಗೊಂಡ ಸಾರ್ವಜನಿಕರು ಮೂವರನ್ನು ತಡೆದಿದ್ದಾರೆ. ಈ ವೇಳೆ ಹರೀಶ್ ಸಿಕ್ಕಿಬಿದ್ದಿದ್ದು ಜತೆಗಿದ್ದ ಇಬ್ಬರು ಪರಾರಿಯಾಗಿದ್ದಾರೆ.
ಹರೀಶ್‌ನ ವರ್ತನೆ ನೋಡಿ ಅನುಮಾನಗೊಂಡ ಸಾರ್ವಜನಿಕರು ಧರ್ಮದೇಟು ನೀಡಿ ಕಳ್ಳನಿರಬೇಕೆಂಬ ಶಂಕೆಯಿಂದ ದೊಡ್ಡಪೇಟೆ ಠಾಣೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ರವಿ ಪಾಟೀಲ್ ನೇತೃತ್ವದ ತಂಡ ಯುವಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.
ಪಾನಮತ್ತನಾಗಿರುವ ಯುವಕ ಗಂಟೆಗಳನ್ನು ಆರ್.ಎಸ್.ಪಾರ್ಕ್‌ನಿಂದ ಕದ್ದಿರುವುದಾಗಿ ಒಮ್ಮೆ ಹೇಳಿದ್ದಾನೆ. ಮತ್ತೊಮ್ಮೆ ಗಾಂಧಿಬಜಾರ್‌ನ ದೇವಸ್ಥಾನದಿಂದ ಕಳವು ಮಾಡಿದ್ದಾಗಿ ಹೇಳುವ ಮೂಲಕ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾನೆ. ಆತನ ಬಳಿ ಪತ್ತೆಯಾದ ಗಂಟೆಗಳು 260 ರೂ. ಮೌಲ್ಯದ್ದಾಗಿದ್ದು ಜತೆಗಿದ್ದವರ ಬಗ್ಗೆಯೂ ಸುಳಿವು ನೀಡುತ್ತಿಲ್ಲ ಎನ್ನಲಾಗಿದೆ. ಕಳೆದ 20 ದಿನಗಳಿಂದ ಆತ ಮನೆಗೆ ತೆರಳಿಲ್ಲ ಎಂಬುದು ಪೊಲೀಸರಿಗೂ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net