ಧರ್ಮ, ಸಂಪ್ರದಾಯ ಪಾಲಿಸೋಣ: ಮುರುಘಾಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ

HAROHALLI MATH 1
Published on

ಹಾರೋಹಳ್ಳಿ: ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯಗಳನ್ನು ಬಿಡದೇ ಎಂದಿಗೂ ಪಾಲಿಸಿಕೊಂಡು ಹೋಗಬೇಕು ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ತಿಳಿಸಿದರು.

ಕನಕಪುರ ತಾಲೂಕಿನ ಶ್ರೀ ಕ್ಷೇತ್ರ ಮರಳೆಗವಿ ಮಠದಲ್ಲಿ ಶನಿವಾರ ಆಯೋಜಿಸಿದ್ದ ಬೆಂಗಳೂರಿನಲ್ಲಿ ನಡೆಯುವ ಶಿವಯೋಗ ಸಂಭ್ರಮ ಅಸಂಖ್ಯಾತ ಪ್ರಮಥ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನದ ಪ್ರಚಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಧರ್ಮ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಶರಣರು ಹಾಕಿಕೊಟ್ಟ ಧರ್ಮದ ಮಾರ್ಗದಲ್ಲಿ ಸಾಗಬೇಕು. ಶರಣ ಪರಂಪರೆ, ವಚನ ಪರಂಪರೆ ಮತ್ತು ಬಸವಣ್ಣನವರ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ಮಠಗಳಲ್ಲಿ ಶ್ರೀ ಮರಳೆ ಗವಿಮಠ ಮುಂಚೂಣಿಯಲಿದೆ. ಈ ಮಠದಲ್ಲಿ ವಿದ್ಯಾ ದಾನ ಮತ್ತು ಅನ್ನದಾನ ಜತೆಗೆ ಸಂಸ್ಕೃತಿ ಕಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಅಸಂಖ್ಯ ಪ್ರಮಥ ಗಣಮೇಳದ ಮೂಲಕ ರಾಷ್ಟ್ರಾದ್ಯಂತ ಇರುವ ಮಠಗಳಿಂದ ಗುರು ಶರಣರು, ಸರ್ವ ಜನಾಂಗದ ಶರಣರು ಮತ್ತು ಶಾಖಾ ಮಠಗಳ ಮುಖ್ಯಸ್ಥರು, ಚಿಂತಕರು, ವಿಚಾರವಂತರು ಭಾಗವಹಿಸಲಿದ್ದಾರೆ ಎಂದರು.

ಶ್ರೀ ಕ್ಷೇತ್ರ ಮರಳೆ ಗವಿಮಠದ ಪೀಠಾಧಿಪತಿಗಳಾದ ಡಾ. ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿಗಳು ಮಾತನಾಡಿ, ನಾವು ಇತಿಹಾಸ ನಿರ್ಮಿಸಬೇಕಿದೆ. ನಮ್ಮ ಶರಣರು ಹಾಕಿಕೊಟ್ಟಿರುವ ಧರ್ಮದ ತಳಹದಿಯ ಮೇಲೆ ನಡೆಯಬೇಕಿದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಸಿದರು.

ಸಿದ್ಧಲಿಂಗೇಶ್ವರರ ಪಾದಸ್ಪರ್ಶದಿಂದ ಈ ನೆಲ ಪಾವನವಾಗಿದೆ. ಮುಂದೆ ನಡೆಯುವ ಎಲ್ಲ ಧರ್ಮ, ಜಾತಿಗಳ ಸಾಮಾಜಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ ಚಿಂತನೆಗಳನ್ನು ನೀಡಲು ಎಲ್ಲರೂ ಒಂದೆಡೆ ಸೇರಿ ಇತಿಹಾಸ ನಿರ್ಮಿಸುವುದು ನಮ್ಮ ಜವಾಬ್ದಾರಿ ಆಗಿದೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕನಕಪುರ ತಾಲೂಕಿನಿಂದ 100 ಬಸ್ಸುಗಳನ್ನು ಕಳಿಸಲಾಗುವುದು ಎಂದು ಹೇಳಿದರು. ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮ ಸ್ವಾಮೀಜಿ ಮತ್ತು ಇತರ ಮಠಗಳ ಸ್ವಾಮೀಜಿಗಳು, ಯತಿವರ್ಯರು ಉಪಸ್ಥಿತರಿದ್ದರು.

ಹಿಂದೆ ಬಸವಣ್ಣನವರ ನೇತೃತ್ವದಲ್ಲಿ 96 ಸಾವಿರ ಗಣಂಗಳು ಸಮಾವೇಶಗೊಂಡಿದ್ದವು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಇಂದಿನ 21 ನೇ ಶತಮಾನದಲ್ಲಿ ಅಂತಹ ಚಾರಿತ್ರಿಕ ಘಟನೆಗೆ ಸಾಕ್ಷಿಯಾಗಲು ಫೆ.16ರಂದು ‘ಶಿವಯೋಗ ಸಂಭ್ರಮ‘ ಎಂಬ ಜ್ಞಾನ ಪರಂಪರೆಯನ್ನು ಸಾಕ್ಷೀಕರಿಸಬೇಕಿದೆ. ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಮುರುಘಾಮಠ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net